ಕೆಎಂಎಫ್ ಗೆ ಶಾಸಕ ಹಿಟ್ನಾಳ ಆಯ್ಕೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ?

| Published : Oct 30 2025, 02:00 AM IST

ಕೆಎಂಎಫ್ ಗೆ ಶಾಸಕ ಹಿಟ್ನಾಳ ಆಯ್ಕೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ?
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲ ನಿರ್ದೇಶಕರು ಕೆಎಂಎಫ್ ಗೆ ಡೆಲಿಗೆಟ್ ಮಾಡಿದ್ದಾರೆ. ಅವರ ಆಶಯದಂತೆ ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

ಬಳ್ಳಾರಿ/ಕೊಪ್ಪಳ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಬುಧವಾರ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಪ್ರತಿನಿಧಿ ಸ್ಥಾನಕ್ಕೆ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೊಡ್ಡಲು ಮುಂದಾಗಿದ್ದಾರೆ.

ರಾಬಕೊವಿ ಬಳ್ಳಾರಿ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತದಿಂದ ಕೆಎಂಎಫ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಸೆಡ್ಡು ಹೊಡೆದಿದ್ದಾರೆ.

ಸಭೆಯಲ್ಲಿ ಒಟ್ಟು 12 ಮತಗಳನ್ನು ಪಡೆದ ಹಿಟ್ನಾಳ ಪ್ರಾತಿನಿಧ್ಯ ತಮ್ಮದಾಗಿಸಿಕೊಂಡರು. ಕೆಎಂಎಫ್‌ ಮಾಜಿ ಅಧ್ಯಕ್ಷ ಭೀಮಾ ನಾಯ್ಕ 4 ಮತ ಪಡೆದರು. ಇದರೊಂದಿಗೆ ಕೆಎಂಎಫ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ಹಿಟ್ನಾಳ್ ಪಡೆದುಕೊಂಡರು.

ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲ ನಿರ್ದೇಶಕರು ಕೆಎಂಎಫ್ ಗೆ ಡೆಲಿಗೆಟ್ ಮಾಡಿದ್ದಾರೆ. ಅವರ ಆಶಯದಂತೆ ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ನಾನು ಸ್ಪರ್ಧೆ ಮಾಡಬೇಕೆ ಅಥವಾ ಬೇಡ ಎನ್ನುವುದನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ರಾಬಕೊವಿ ಹಾಲು ಒಕ್ಕೂಟಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಪ್ರವೇಶ ಪಡೆದಿದ್ದೇ ರೋಚಕ. ಯಾವುದೇ ಹಾಲು ಒಕ್ಕೂಟದಿಂದ ಅಥವಾ ತಾಲೂಕಿನ ಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದಿರಲಿಲ್ಲ. ಆದರೆ, ಸರ್ಕಾರದಿಂದ ನೇರವಾಗಿ ನೇಮಕವಾಗಿ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಭೀಮಾ ನಾಯಕ ಪೈಪೋಟಿಯೊಡ್ಡಿದಾಗ ಹಠಕ್ಕೆ ಬಿದ್ದು ಅಧ್ಯಕ್ಷರಾಗಿ ಆಯ್ಕೆಯಾದರು. ಅದಾದ ಮೇಲೆ ಮಾಜಿ ಶಾಸಕ ಭೀಮಾ ನಾಯಕ ನಾನು ಕೆಎಂಎಫ್ ಪ್ರತಿನಿಧಿಯಾಗಿ ಆಯ್ಕೆಯಾಗುತ್ತೇನೆ, ಹೀಗಾಗಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಆದರೆ, ಈಗ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರೇ ರಾಬಕೊವಿ ಅಧ್ಯಕ್ಷರಾದ ಮೇಲೆ ಕೆಎಂಎಫ್ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದು, ಈ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಹಿಟ್ನಾಳ ಕಣ್ಣಿಟ್ಟಿದ್ದಾರೆ.

ರಾಬಕೊವಿ ಅಧ್ಯಕ್ಷರನ್ನಾಗಿ ಮಾಡಿದ್ದ ನಿರ್ದೇಶಕರೇ ಈಗ ಸರ್ವಾನುಮತದಿಂದ ಕೆಎಂಎಫ್ ಡೆಲಿಗೆಟ್‌ ಮಾಡಿದ್ದಾರೆ. ಹೀಗಾಗಿ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬಲವಾದ ಆಕಾಂಕ್ಷಿಯಾಗಿದ್ದೇನೆ ಎಂದು ರಾಬಕೊವಿ ಅಧ್ಯಕ್ಷ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.