ಚನ್ನಗಿರಿ: ಪಟ್ಟಣದ ಪ್ರಮುಖ ಖಾಸಗಿ ಬಸ್ ನಿಲ್ದಾಣದ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಸ್ಥಳಕ್ಕೆ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಬುಧವಾರ ಭೇಟಿ ನೀಡಿ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಿದರು.

ಬಸ್‌ಸ್ಟ್ಯಾಂಡ್‌ ಆಧುನೀಕರಣ ಕಾಮಗಾರಿ ಕ್ರಿಯಾ ಯೋಜನೆಯಲ್ಲಿ ಸೂಚಿಸಿದಂತೆ ಗುಣಮಟ್ಟದಿಂದ ಕೂಡಿರಬೇಕು. ಈ ನಿಲ್ದಾಣದ ಆವರಣದಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳು ಕಂಗೊಳಿಸುವಂತೆ ಮಾಡಿ, ಕಾಮಗಾರಿ ಶೇ.90ರಷ್ಟು ಮುಗಿದ ನಂತರ ಮತ್ತೊಮ್ಮೆ ಬಂದು ಪರಿಶೀಲಿಸುತ್ತೇನೆ ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರ ಕಾಕನೂರು ಕೆ.ಪಿ.ಮಹೇಶ್ ಅವರಿಗೆ ಸೂಚನೆ ನೀಡಿದರು.

ಖಾಸಗಿ ಬಸ್‌ ನಿಲ್ದಾಣ ಆಧುನೀಕರಣ ಕಾಮಗಾರಿ ₹1.36 ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದು, ಇನ್ನು ಹೆಚ್ಚಿನ ಮೂಲಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಹೆಚ್ಚುವರಿಯಾಗಿ ₹60 ಲಕ್ಷ ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. ನಿಲ್ದಾಣದ ಒಳಗೆ ಇರುವಂತಹ ಸಿಹಿನೀರಿನ ಸೇದುವ ಗಾರೆ ಬಾವಿಯನ್ನು ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಗಾರೆ ಬಾವಿಗೆ ರಕ್ಷಣಾ ಕವಚ ಹಾಕಿ, ಉತ್ತಮವಾದ ಬಣ್ಣ ಬಳಿದು ಬಾವಿಯ ಸುಂದರತೆಯನ್ನು ಹೆಚ್ಚಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಶಾಸಕರು ಸೂಚನೆ ನೀಡಿದರು.

ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದಂತವರು ಒಂದೇ ಮಳಿಗೆಯಲ್ಲಿ ಎರಡು ಭಾಗ ಮಾಡಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಎಂಬ ದೂರುಗಳು ಬಂದಿವೆ. ಅಂಥವುಗಳನ್ನು ಏಕಮಳಿಗೆಯನ್ನು ಮಾಡಿ ಎಂದು ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ಈಗಾಗಲೇ ಸರ್ಕಾರಿ ಬಸ್‌ಗಳು ತಾತ್ಕಾಲಿಕ ನಿಲುಗಡೆಗಾಗಿ ಕೆರೆಯ ಮುಂಭಾಗದಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ಸಂತೆಬೆನ್ನೂರು ಕಡೆ ಹೋಗುವ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಶಿವಮೊಗ್ಗ, ನಲ್ಲೂರು, ದಾವಣಗೆರೆ, ಭದ್ರಾವತಿ ಕಡೆಗೆ ಹೋಗುವ ಸರ್ಕಾರಿ ಬಸ್‌ಗಳ ನಿಲುಗಡೆಗೆ ಗಣಪತಿ ಹೊಂಡದ ಬಳಿ ಇರುವ ಕಾರ-ಮಂಡಕ್ಕಿ ಅಂಗಡಿಗಳನ್ನು ತೆರೆವುಗೊಳಿಸಿ ಆ ಜಾಗದಲ್ಲಿ ಸರ್ಕಾರಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿರುವ ತಿಂಡಿ ಅಂಗಡಿಗಳ ವ್ಯಾಪಾರಸ್ಥರಿಗೆ ಬೇರೆ ಕಡೆ ಜಾಗದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದ ಶಾಸಕ ಶಿವಗಂಗಾ ತಿಳಿಸಿದರು.


ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ಲೊಕೋಪಯೋಗಿ ಇಲಾಖೆ ಅಭಿಯಂತರ ರವಿಕುಮಾರ್, ರಾಜಸ್ವ ನಿರೀಕ್ಷಕ ಸಿದ್ರಾಮೇಶ್, ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ಅಭಿಯಂತರ ವೆಂಕಟೇಶ್, ಮಂಜುನಾಥ್, ಕಂದಾಯ ಅಧಿಕಾರಿ ರಮೇಶ್, ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಮುಖಂಡರಾದ ಮಾವಿನಕಟ್ಟೆ ಶ್ರೀಕಾಂತ್, ಜೋಳದಾಳ್ ಕುಮಾರ್, ಜಯದೇವ್, ರವಿಕುಮಾರ್, ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದ ಬಾಡಿಗೆದಾರರು, ಖಾಸಗಿ ಬಸ್‌ಗಳ ಏಜೆಂಟರು ಹಾಜರಿದ್ದರು.

- - -

-13ಕೆಸಿಎನ್‌ಜಿ1:

ಚನ್ನಗಿರಿ ಖಾಸಗಿ ಬಸ್ ನಿಲ್ದಾಣ ಆಧುನೀಕರಣ ಕಾಮಗಾರಿಯನ್ನು ಶಾಸಕ ಬಸವರಾಜು ಪರಿಶೀಲಿಸಿದರು. ತಹಸೀಲ್ದಾರ್ ನಾಗರಾಜ್, ಗುತ್ತಿಗೆದಾರರು, ಅಧಿಕಾರಿಗಳು ಇದ್ದರು.