ಸಾರಾಂಶ
ಅರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ, ಬಡ ಜನರಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯ ತತ್ಪರರಾಗಬೇಕೆಂದು ಶಾಸಕ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕುಶಾಲನಗರ : ಅರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ, ಬಡ ಜನರಿಗೆ ಸರ್ಕಾರದ ಸವಲತ್ತುಗಳು ದೊರೆಯುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯ ತತ್ಪರರಾಗಬೇಕೆಂದು ಶಾಸಕ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಶಾಲನಗರ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ನಾಮನಿರ್ದೇಶನ ಗೊಂಡಿರುವ ಕೆಡಿಪಿ ಸದಸ್ಯರು ನಾಗರಿಕರ ಅಹವಾಲನ್ನು ಗಮನಕ್ಕೆ ತಂದ ಸಂದರ್ಭ ಕೂಡಲೇ ಸ್ಪಂದಿಸುವಂತೆ ಶಾಸಕರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಚೇರಿಯಲ್ಲಿ ಸರ್ವರ್ ಸಮಸ್ಯೆ ಮೂಲಕ ಯಾವುದೇ ನೋಂದಣಿಗಳು, ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ತಮ್ಮ ನಿರಂತರ ಸಮಸ್ಯೆ ತೋಡಿಕೊಂಡರು.
ಶ್ರೀಮಂತರ ಬಳಿ ನಿಯಮಬಾಹಿರವಾಗಿ ಇರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕುಶಾಲನಗರದ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು, ಸರ್ಕಾರದ ಹಣ ಅನಗತ್ಯವಾಗಿ ಪೋಲಾಗಿರುವ ಬಗ್ಗೆ ಹಾಗೂ ಆಸ್ಪತ್ರೆಗೆ ನೆರೆಜಿಲ್ಲೆಗಳಿಂದ ಸಿಬ್ಬಂದಿ ನೇಮಕ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಈ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ ಪಿ ಶಶಿಧರ್ ಶಾಸಕರ ಗಮನಕ್ಕೆ ತಂದರು.
ಆಯುಷ್ ಇಲಾಖೆ ವತಿಯಿಂದ ಕುಶಾಲನಗರದಲ್ಲಿರುವ ಆಯುರ್ವೇದ ಆಸ್ಪತ್ರೆ ಮೂಲಕ ರೋಗಿಗಳಿಗೆ ಹೆಚ್ಚಿನ ಸವಲತ್ತು ನೀಡುವ ಬಗ್ಗೆ ಶಾಸಕರು ವೈದ್ಯರಿಗೆ ಸಲಹೆ ನೀಡಿದರು.
ಗಿರಿಜನ ಹಾಡಿಯ ಜೇನು ಕುರುಬ ಅರ್ಹ ಫಲಾನುಭವಿಗಳಿಗೆ ಜಾತಿ ಪ್ರಮಾಣ ಪತ್ರ ಈಗಾಗಲೇ ನೀಡಿರುವುದಾಗಿ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಶಾಸಕರ ಗಮನಕ್ಕೆ ತಂದರು.
ಜಾತಿ ಪ್ರಮಾಣ ಪತ್ರ, ಆಯುಷ್ಮಾನ್ ಕಾರ್ಡ್ ಮತ್ತಿತರ ಸೌಲಭ್ಯಗಳನ್ನು ನೀಡುವಂತೆ ಗಿರಿಜನ ಇಲಾಖೆಯ ಅಧಿಕಾರಿ ಸಿದ್ದೇಗೌಡ ಅವರಿಗೆ ಸೂಚನೆ ನೀಡಲಾಯಿತು.
ಮಧ್ಯ ಮಾರಾಟ ಸಂಬಂಧ ಇರುವ ಕಾನೂನು ನಿಯಮಗಳ ಉಲ್ಲಂಘನೆ ಮಾದಕ ವಸ್ತುಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮದ್ಯದ ಅಂಗಡಿಗಳಲ್ಲಿ ಮತ್ತು ಬಾರ್ ಗಳಲ್ಲಿ ಸಿ ಸಿ ಕ್ಯಾಮೆರಾ ಗಳನ್ನು ನಿರಂತರ ಪರಿಶೀಲನೆ ನಡೆಸಬೇಕು. ನಿಯಮ ಮೀರಿದಲ್ಲಿ ದಂಡ ಅಥವಾ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೊಡಗು ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಝೀವಲ್ ಖಾನ್, ತಹಸೀಲ್ದಾರ್ ಕಿರಣ್ ಗೌರಯ್ಯ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರ್, ಅರಣ್ಯ ಇಲಾಖಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಆಹಾರ ಇಲಾಖೆ ನಿರೀಕ್ಷಕ ಎಂ.ಎಸ್. ಸ್ವಾತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದೇಗೌಡ, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ, ಆಯುಷ್ ಇಲಾಖೆಯ ಡಾ.ಸ್ಮಿತಾ, ಅಬಕಾರಿ ಇಲಾಖೆಯ ನಿರೀಕ್ಷಕ ಲೋಕೇಶ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಎನ್.ಕುಮಾರಸ್ವಾಮಿ, ಆರಕ್ಷಕ ಇಲಾಖೆಯ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳು, ಕೆಡಿಪಿ ಸದಸ್ಯರು ಇದ್ದರು.