ಸಾರಾಂಶ
- ಜಿಲ್ಲಾಸ್ಪತ್ರೆ ಆವರಣದಲ್ಲಿ 22 ಕೋಟಿ ವೆಚ್ಚದಲ್ಲಿ ನಿರ್ಮಾಣ - ಹಳೇ ಆಸ್ಪತ್ರೆಯಲ್ಲೂ ಆರೋಗ್ಯ ಸೇವೆ ನೀಡಲು ಮರುಜೀವ
ಕನ್ನಡಪ್ರಭ ವಾರ್ತೆ ರಾಮನಗರಸ್ಕ್ಯಾನಿಂಗ್, ತುರ್ತು ಶಸ್ತ್ರ ಚಿಕಿತ್ಸೆ, ಐಸಿಯು ವಿಭಾಗಗಳು ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಒಳಗೊಂಡಿರುವ ಕ್ರಿಟಿಕಲ್ ಕೇರ್ ಸೆಂಟರ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ನನ್ನ ಪುಣ್ಯ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೇಂದ್ರದ ಎನ್‌ಎಚ್‌ಎಮ್ ಯೋಜನೆಯಡಿ 22 ಕೋಟಿ ರು. ವೆಚ್ಚದಲ್ಲಿ ಮೂರು ಅಂತಸ್ತಿನ ಕ್ರಿಟಿಕಲ್ ಕೇರ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ಹಳೇ ಕಟ್ಟಡದಲ್ಲಿ ಕೆಲವು ಸೇವೆಗೆ ಸೀಮಿತವಾಗಿದ್ದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಸುಸಜ್ಜಿತವಾದ ಜಿಲ್ಲಾಸ್ಪತ್ರೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಎಲ್ಲ ಆರೋಗ್ಯ ಸೇವೆಗಳನ್ನು ಸಿಗುವಂತೆ ಕ್ರಮ ವಹಿಸಲಾಗಿದೆ. ನುರಿತ ವೈದ್ಯರ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಆಸ್ಪತ್ರೆಯ ಪರಿಮಿತಿಯಲ್ಲಿ ಶವಾಗಾರ, ಅಡುಗೆ ಮನೆ, ವೈದ್ಯರ ವಸತಿಗೃಹಗಳು ಪ್ರತ್ಯೇಕವಾಗಿ ಸುಸಜ್ಜಿತ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದೀಗ 22 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವ ಹೊಸ ಕಟ್ಟಡದ ಸೇವೆಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಹಳೇ ಆಸ್ಪತ್ರೆಯಲ್ಲೂ ಆರೋಗ್ಯ ಸೇವೆ ನೀಡಲು ಮರು ಜೀವ ಕೊಟ್ಟು, ವೈದ್ಯರ ಜೊತೆ ಚರ್ಚಿಸಿ ಆ ಭಾಗದಲ್ಲಿಯೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಹೊಸದಾಗಿ ಆರಂಭವಾದ ಆಸ್ಪತ್ರೆಗೆ ನುರಿತ ವೈದ್ಯರು ಮತ್ತು ಸಿಬ್ಬಂದಿ ಅವಶ್ಯಕತೆಯ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ಗಳು, ವೈದ್ಯರಿದ್ದು, ಮತ್ತಷ್ಟು ಸಿಬ್ಬಂದಿಗಳನ್ನು ಬೇರೆ ಆಸ್ಪತ್ರೆಗಳಿಂದ ನಿಯೋಜನೆ ಮಾಡಲಾಗಿದೆ. ಸಿಬ್ಬಂದಿ ಕೊರತೆಯಾಗದಂತೆ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಗ್ಯಾರಂಟಿ ಸಮಿತಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ರಾಜು, ತಾಲೂಕು ಗ್ಯಾರಂಟಿ ಸಮಿತಿ ಪ್ರಾಧಿಕಾರದ ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಅನಿಲ್ ಜೋಗೇಂದರ್, ಹಿಂದುಳಿದ ಘಟಕದ ಅಧ್ಯಕ್ಷ ರೈಡ್‌ನಾಗರಾಜು, ನಗರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಅಜ್ಮತ್ , ಸದಸ್ಯರಾದ ಆಯಿಷಾಬಾನು, ಆರೀಫ್ , ಪೈರೋಜ್, ನಿಜಾಂಷರೀಪ್ ಜಿಲ್ಲಾ ಶಸ್ತ್ ಚಿಕಿತ್ಸಕ ಡಾ.ಮಂಜುನಾಥ್, ವೈದ್ಯರಾದ ಡಾ.ನಾರಾಯಣಸ್ವಾಮಿ, ಮುಖಂಡರಾದ ಕೆಂಪರಾಮು, ಪಾರ್ಥಸಾರಥಿ, ನರಸಿಂಹಯ್ಯ, ಗುರುವಯ್ಯ, ವೆಂಕಟೇಶ್, ಮೊಟ್ಟೆದೊಡ್ಡಿ ಚೇತನ್, ಲಕ್ಷ್ಮಿಪತಿ, ಬಿಡದಿ ನಾರಾಯಣ್, ಗುಡ್ಡೆವೆಂಕಟೇಶ್ ಮತ್ತಿತರರು ಹಾಜರಿದ್ದರು.ಸಾಧಕ ಬಾಧಕ ನೋಡಿ ತೀರ್ಮಾನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ, ಚುನಾವಣೆ ನಡೆಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಜಿಲ್ಲೆಯ ಮಾಗಡಿ, ಬಿಡದಿ, ಕನಕಪುರದಲ್ಲಿ ಈಗಾಗಲೇ ಪ್ರಕ್ರಿಯೆಗಳು ನಡೆಯುತ್ತಿವೆ. ಚನ್ನಪಟ್ಟಣ, ರಾಮನಗರ ಮಾತ್ರ ಚುನಾವಣೆ ದಿನಾಂಕ ನಿಗದಿಯಾಗಿಲ್ಲ, ಅಧಿಕಾರಿಗಳು ಹಂತಹಂತವಾಗಿ ಚುನಾವಣೆ ಮಾಡುತ್ತಿದ್ದಾರೆ. ಸಾಧಕ-ಭಾದಕಗಳನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರು ಹೇಳಿದರು.
ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಬಹಳ ಹಿರಿಯರಿದ್ದಾರೆ. ಒಬ್ಬ ಶಾಸಕರಾಗಿ, ಸಚಿವರಾಗಿದ್ದವರು. ಆ ರೀತಿ ಮಾತನಾಡಬಾರದಿತ್ತು. ಆ ರೀತಿಯ ಸಂಕುಚಿತ ಭಾವನೆಯನ್ನು ಇಟ್ಟು ಕೊಳ್ಳಬಾರದು. ಒಂದು ಸಮುದಾಯದ ಬಗ್ಗೆ ಜಾತಿನಿಂದನೆ ಮಾಡಿ ಮಾತನಾಡಿರುವುದು ನನಗೂ ನೋವಾಗಿದೆ. ಅವರು ದುಡುಕಿ ಮಾತನಾಡಿ ತಪ್ಪು ಮಾಡಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ.-ಇಕ್ಬಾಲ್‌ಹುಸೇನ್, ಶಾಸಕರು