ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಸದ ತುಕಾರಾಂ ಕೆಂಡಾಮಂಡಲ

| Published : Oct 29 2024, 12:53 AM IST

ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಂಸದ ತುಕಾರಾಂ ಕೆಂಡಾಮಂಡಲ
Share this Article
  • FB
  • TW
  • Linkdin
  • Email

ಸಾರಾಂಶ

ಉಪ ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಿದ್ದಾರೆ.

ಸಂಡೂರು: ಸಂಡೂರು- ಹೊಸಪೇಟೆ, ತೋರಣಗಲ್- ಕೂಡ್ಲಿಗಿ, ಕುಮಾರಸ್ವಾಮಿ ದೇವಸ್ಥಾನದ ರಸ್ತೆಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಬಿಜೆಪಿ ನಾಯಕರು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಈ.ತುಕಾರಾಂ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಿದ್ದಾರೆ. ಬರೀ ಸುಳ್ಳುಗಳನ್ನು ಹೇಳಿಕೊಂಡೇ ಇವರು ಬಂದಿದ್ದಾರೆ. ಹೀಗಾಗಿಯೇ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೇಳಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ಸಂಸದ ತುಕಾರಾಂ ಹರಿಹಾಯ್ದರು.

ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮಾಲೀಕತ್ವದ ರಾಘವೇಂದ್ರ ಕನ್‌ಸ್ಟ್ರಕ್ಷನ್ ಆ್ಯಂಡ್ ಕಂಪನಿ ಹೆಸರಿನಲ್ಲಿ ಸಂಡೂರು ಹೊಸಪೇಟೆ 28 ಕಿ.ಮೀ. ರಸ್ತೆ ನಿರ್ಮಾಣ ಗುತ್ತಿಗೆ ಕೆಲಸವನ್ನು 2001ರ ಮಾರ್ಚ್ 9ರಂದು ಜರುಗಿದ ಟೆಂಡರ್ ಪ್ರಕ್ರಿಯೆಯಲ್ಲಿ ₹2.38 ಕೋಟಿಗೆ ಪಡೆಯುತ್ತಾರೆ. ಅಂದಿನ ಮಂತ್ರಿ ಎಂ.ವೈ. ಘೋರ್ಪಡೆ ಅವರಿಂದ ಭೂಮಿಪೂಜೆ ಮಾಡಿಸುತ್ತಾರೆ. ಕಾಮಗಾರಿ ಕೆಲಸ ಪೂರ್ಣಗೊಳಿಸಲಿಲ್ಲ. ಗುತ್ತಿಗೆಯನ್ನು ಪಿಡಬ್ಲುಡಿ ಕಾರ್ಯಪಾಲಕ ಅಭಿಯಂತರರ ಕಚೇರಿಯಿಂದ ಗುತ್ತಿಗೆ ರದ್ದುಪಡಿಸಿದಾಗಲೇ ಬ್ಲಾಕ್ ಲಿಸ್ಟ್‌ಗೆ ಸಂಸ್ಥೆ ಸೇರಿಸಿ ಇಎಂಡಿ ₹2.30 ಲಕ್ಷ ಭದ್ರತಾ ಠೇವಣಿ ₹1.92 ಲಕ್ಷ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಶೇ.7.50ರಷ್ಟು ದಂಡ ವಿಧಿಸಿದೆ.

ಸಂತೋಷ್ ಲಾಡ್ ಶಾಸಕರಾದ ನಂತರ 2005ರ ಮೇ 10ರಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರು. 2006ರ ವರೆಗೆ ಪ್ರಕರಣ ನ್ಯಾಯಾಲಯದಲ್ಲಿತ್ತು. ಸಂಡೂರು - ಹೊಸಪೇಟೆ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯನ್ನು ಬ್ಲಾಕ್‌ಲೀಸ್ಟ್‌ಗೆ ಹಾಕಿ ದಂಡ ವಸೂಲಿ ಮಾಡಲು ಆದೇಶಿಸಿತ್ತು.

ಸಂಡೂರು -ಹೊಸಪೇಟೆ ರಸ್ತೆ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಎಂದು ಹೇಳಲಾಯಿತು. 2010ರಲ್ಲಿ ಎಂಎಂಎಲ್‌ ಕಂಪನಿಯಿಂದ ₹50 ಕೋಟಿ ಇಕ್ವಿಟಿ ಷೇರ್‌ನ್ನು ಕೆಆರ್‌ಡಿಸಿಎಲ್‌ಗೆ ಡೆಪಾಸಿಟ್ ಮಾಡಿಸಿ ಹುಡ್ಕೊದಿಂದ ₹135 ಕೋಟಿ ಬಿಒಟಿ ಅಡಿ ಸಾಲ ಪಡೆದು ಟೋಲ್ ಮೂಲಕ ಸಾಲ ತೀರಿಸುವ ಕೆಲಸ ಮಾಡಿ ರಸ್ತೆ ನಿರ್ಮಿಸಲಾಗಿದೆ. 2010ರ ಅ.31ರಂದು ಜಿಲ್ಲಾಧಿಕಾರಿ ಕಲ್ಯಾಣಿ ಎಚ್.ಟಿ. ಅವರು ಜೆಎಸ್‌ಡಬ್ಲು, ವಿ.ಎಸ್. ಲಾಡ್, ಬಿಕೆಜಿ, ವೆಸ್ಕೊ, ಎಚ್.ಆರ್.ಜಿ. ಸ್ಮಯೋರ್, ಬಿಎಂಎಂ, ಗಣಿ ಸಂಸ್ಥೆಗಳಿಗೆ ಐತಿಹಾಸಿಕ ಕುಮಾರಸ್ವಾಮಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಪತ್ರ ಬರೆದಿದ್ದರು. 2010ರ ಡಿ.20ರಂದು ₹23.49 ಕೋಟಿಗೆ ಪಿಡಬ್ಲ್ಯೂಡಿ ಇಲಾಖೆ ಎಸ್ಟಿಮೇಟ್ ಮಾಡುತ್ತದೆ. ಅದರಂತೆ ಗಣಿ ಕಂಪನಿಗಳು ಶೇ. 10 ಹಣ ₹3.35 ಕೋಟಿ ಅಡ್ವಾನ್ಸ್‌ನ್ನು ಬಳ್ಳಾರಿ ಮೂಲದ ಆರ್‌ಕೆ ಇನ್‌ಫ್ರಾ ಎಂಜಿನಿಯರಿಂಗ್ ಕಂಪನಿಗೆ ಕೊಟ್ಟ ಹಣವನ್ನು ತೆಗೆದುಕೊಂಡು ಹೋದರು. ಆದರೆ, ಕೆಲಸ ಮಾಡಲಿಲ್ಲ.

ಆನಂತರ ₹23.49 ಕೋಟಿ ವೆಚ್ಚದಲ್ಲಿ ಗಣಿ ಕಂಪನಿಗಳು ರಸ್ತೆ ನಿರ್ಮಾಣ ಮಾಡಿವೆ. ಆದರೆ ತಾವೇ ರಸ್ತೆ ನಿರ್ಮಾಣ ಮಾಡಿದ್ದು ಎಂದು ಜನಾರ್ದನ ರೆಡ್ಡಿ ಸುಳ್ಳು ಹೇಳುತ್ತಿದ್ದಾರೆ. ಈ ರೀತಿಯ ಸುಳ್ಳುಗಳನ್ನು ಜನರು ನಂಬಬಾರದು ಎಂದು ತುಕಾರಾಂ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಏಕಾಂಬ್ರಪ್ಪ, ಸಿ. ಸತೀಶಕುಮಾರ್, ವಾಡಾ ಮಾಜಿ ಅಧ್ಯಕ್ಷ ರೋಷನ್‌ಜಮೀರ್ ಇತರರಿದ್ದರು.