ಹಲಕುರ್ಕಿ ವಿಮಾನ ನಿಲ್ದಾಣ ತಡೆದಿದ್ದು ಶಾಸಕ ಜೆ.ಟಿ.ಪಾಟೀಲ : ನಿರಾಣಿ

| Published : Apr 12 2024, 01:14 AM IST / Updated: Apr 12 2024, 10:58 AM IST

ಸಾರಾಂಶ

 ಹಲಕುರ್ಕಿಯ  ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಂಡಿದ್ದೆ. ಆದರೆ, ಅದು ನಿರ್ಮಾಣವಾಗದಂತೆ, ರೈತರು ಭೂಮಿ ನೀಡದಂತೆ ಮಾಡಿದ್ದು,  ಜೆ.ಟಿ.ಪಾಟೀಲರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರಗೇಶ ನಿರಾಣಿ   ಮಾಜಿ ಶಾಸಕ ಆನಂದ ನ್ಯಾಮಗೌಡರಿಗೆ ಪ್ರತ್ಯುತ್ತರ ನೀಡಿದರು.

  ಕಲಾದಗಿ :  ಹಲಕುರ್ಕಿಯ 1600  ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಂಡಿದ್ದೆ. ಆದರೆ, ಅದು ನಿರ್ಮಾಣವಾಗದಂತೆ, ರೈತರು ಭೂಮಿ ನೀಡದಂತೆ ಮಾಡಿದ್ದು, ಇದೇ ನಿಮ್ಮ ಕಾಂಗ್ರೆಸ್‌ ಶಾಸಕ ಜೆ.ಟಿ.ಪಾಟೀಲರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರಗೇಶ ನಿರಾಣಿ ಅವರು ಮಾಜಿ ಶಾಸಕ ಆನಂದ ನ್ಯಾಮಗೌಡರಿಗೆ ಪ್ರತ್ಯುತ್ತರ ನೀಡಿದರು.

ಬೀಳಗಿ ಮತಕ್ಷೇತ್ರದ ಕಲಾದಗಿ ಜಿಪಂ ಮತಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪ್ರಮುಖ ಕಾರ್ಯಕರ್ತ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಿಲ್ಲ ಎಂದು ಆನಂದ ನ್ಯಾಮಗೌಡರ ಕೇಳಿದ್ದಾರೆ. ಆದರೆ, ನಾನು ಮಾಡಿದ ಪ್ರಯತ್ನದ ಬಗ್ಗೆ ನಿಮಗೆ ಗೊತ್ತಿಲ್ಲವೇ? ವಿಮಾನ ನಿಲ್ದಾಣ ನಿರ್ಮಾಣವಾಗದಂತೆ ಮಾಡಿದವರು ನಿಮ್ಮ ಕಾಂಗ್ರೆಸ್ ನಾಯಕ ಜೆ.ಟಿ.ಪಾಟೀಲರು ಎಂಬುವುದು ಗೊತ್ತಿರಲಿ. ಇಲ್ಲವಾದಲ್ಲಿ ಇಷ್ಟೊತ್ತಿಗೆ ವಿಮಾನ ನಿಲ್ದಾಣ ಸಿದ್ಧವಾಗುತ್ತಿತ್ತು ಎಂದು ಕಿಡಿ ಕಾರಿದರು.

ಇಂದು ದೇಶಾದ್ಯಂತ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದೆ. ೨೦೨೪ರ ಲೊಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಅಧಿಕ ಸ್ಥಾನ ಪಡೆಯಲಿದೆ. 370 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಜಗತ್ತಿನಲ್ಲಿ ಭಾರತ ನಂ.೧ ಸ್ಥಾನಕ್ಕೆ ಬರಬೇಕಾದರೆ ಮೋದಿ ಬೇಕು. ಮೋದಿಜಿ 3ನೇ ಬಾರಿಗೆ ಪ್ರಾಧಾನಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ನೀವೆ ಪಿ.ಸಿ.ಗದ್ದಿಗೌಡರ, ನರೇಂದ್ರ ಮೋದಿ ಎಂದು ಭಾವಿಸಿ ಪ್ರಚಾರ ನಡೆಸಿ ಚುನಾವಣೆ ಗೆಲ್ಲಬೇಕು ಎಂದರು. ಕೆ.ಆರ್‌.ಶಿಲ್ಪಿ, ಶಿವಣ್ಣ ಅಂಗಡಿ, ಕಿಷ್ಟಪ್ಪ ಬಿಲಕೇರಿ ಹೂವಪ್ಪ ರಾಠೋಡ ಮಾತನಾಡಿದರು. ಲಕ್ಷ್ಮಣಗೌಡ ಗೌಡರ, ವೆಂಕಟೇಶ ರಂಗನ್ನವರ್, ಬಶೆಟ್ಟಿ ಅಂಗಡಿ ಇನ್ನಿತರರು ಇದ್ದರು.

ಡಿಕೆಶಿ ಚಪ್ಪಲಿ ಹೊತ್ತು ತಿರುಗುವೆ:ಡಿಸಿಎಂ ಡಿಕೆಶಿ ಅವರು ಮೋದಿ ಮತ್ತೆ ಪ್ರಧಾನಿ ಆಗುವುದಿಲ್ಲ ಎಂದು ಹಗುರವಾಗಿ ಮಾತನಾಡಿದ್ದಾರೆ. ಮೋದಿ ಪ್ರಧಾನಿಯಾಗದಿದ್ದರೆ ಡಿಕೆಶಿಯ ಪಾದರಕ್ಷೆ ಹೊತ್ತು ಅವರ ಕ್ಷೇತ್ರದಲ್ಲಿ ತಿರುಗುವೆ. ಒಂದು ವೇಳೆ ಮೋದಿ ಪ್ರಧಾನಿಯಾದರೆ ನೀವೇನು ಮಾಡುವಿರಿ ಎಂದು ಡಿಕೆಶಿಗೆ ಅಂಕಲಗಿ ಗ್ರಾಮದ ಮೋದಿ ಅಪ್ಪಟ ಅಭಿಮಾನಿ ಲಚ್ಚಪ್ಪ ಹೊಸಮನಿ ಸವಾಲು ಹಾಕಿದರು.