ಕರ್ನಾಟಕದಲ್ಲೇ ಅತ್ಯಂತ ಮನೆ ಮಾತಾಗಿರುವ ನೀನಾಸಂ ಪ್ರತಿ ವರ್ಷ ವಿಭಿನ್ನ ಕಥೆಗಳನ್ನು ರಂಗಕ್ಕೆ ಅಳವಡಿಸಿ ರಾಜ್ಯಾದ್ಯಂತ ತಿರುಗಾಟ ಮಾಡುತ್ತಾ ಬಂದಿದೆ. ಹಲವಾರು ದಶಕಗಳಿಂದಲೂ ಕೂಡ ಕರುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಅದು ಹಿಗ್ಗಿಸಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ನೀಲಕಂಠೇಶ್ವರ ನಾಟ್ಯ ಸಂಘವು ಪ್ರತಿ ವರ್ಷ ರಾಜ್ಯಾದ್ಯಂತ ಸದಭಿರುಚಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ವ್ಯಾಖ್ಯಾನಿಸಿದರು.ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ದಿವಂಗತ ಚಿದಂಬರರಾವ್ ಜಂಬೆ ನೆನಪಿನಲ್ಲಿ ಆಯೋಜಿಸಲಾಗಿದ್ದ ಎರಡು ದಿವಸಗಳ ನೀನಾಸಂ ನಾಟಕೋತ್ಸವಕ್ಕೆ ನಗಾರಿ ಬಾರಿಸುವುದರ ಮೂಲಕ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೊದಲೆಲ್ಲಾ ನೀನಾಸಂ ಪ್ರತಿ ವರ್ಷ ಒಂದು ಕನ್ನಡ ನಾಟಕ, ಒಂದು ಭಾರತೀಯ ನಾಟಕ ಹಾಗೂ ಮತ್ತೊಂದು ಪಾಶ್ಚಿಮಾತ್ಯ ನಾಟಕಗಳನ್ನು ತಿರುಗಾಟಕ್ಕೆ ಆಯ್ಕೆ ಮಾಡಿಕೊಂಡು ಪ್ರದರ್ಶನ ಮಾಡುತ್ತಾ ಇತ್ತು. ಈಗ ಪ್ರತಿ ವರ್ಷ ಎರಡು ನಾಟಕಗಳು ಆಯ್ಕೆ ಮಾಡಿಕೊಂಡು ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಿದೆ. ರಾಮಾಯಾಣ, ಮಹಾಭಾರತದಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿನ ಆದರ್ಶಗಳನ್ನು ಜನರಿಗೆ ದಾಟಿಸುವ ಕೆಲಸವನ್ನು ನೀನಾಸಂ ಮಾಡುತ್ತಿದೆ ಎಂದರು.ಸಿನಿಮಾ ಹಾಗೂ ರಂಗಭೂಮಿ ಕಲಾವಿದ ಗೋಮಾರದಹಳ್ಳಿ ಮಂಜುನಾಥ್ ಮಾತನಾಡಿ, ಹೊಸ ಅಲೆಯ ನಾಟಕಗಳು ತುಮಕೂರಿನಲ್ಲಿ ಪ್ರದರ್ಶನವಾಗುತ್ತಿರುವುದು ಶ್ಲಾಘನೀಯ ಎಂದರು. ತುಮಕೂರಿನಲ್ಲಿ ಝೆನ್ ಟೀಮ್ ಕಳೆದ ೨ ದಶಕಗಳಿಂದ ನಿರಂತರವಾಗಿ ಆಧುನಿಕ ರಂಗಭೂಮಿಯನ್ನು ಜೀವಂತವಾಗಿ ಇಟ್ಟಿದ್ದಾರೆ.
ನೀನಾಸಂ ಸಂಸ್ಥೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ ಕಟ್ಟಿದ ಹೆಗ್ಗಳಿಕೆ ಚಿದಂಬರರಾವ್ ಜಂಬೆ ಅವರದ್ದು. ಅವರ ನೆನಪಿನಲ್ಲಿ ನಾಟಕೋತ್ಸನ ನಡೆಯುತ್ತಿರುವುದು ಖುಷಿಯ ವಿಷಯ ಎಂದರು.ಕೈಗಾರಿಕೋದ್ಯಮಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಎಚ್.ಜಿ. ಚಂದ್ರಶೇಖರ್ ಮಾತನಾಡಿ, ಹೊಸ ಅಲೆಯ ನಾಟಕಗಳೆಂದರೆ ನಮಗೆ ತಕ್ಷಣ ನೆನಪಾಗುವುದು ನೀನಾಸಂ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪುಟ್ಟ ಗ್ರಾಮದಲ್ಲಿ ಕೆ.ವಿ. ಸುಬ್ಬಣ್ಣ ಅವರು ಆರಂಭಿಸಿದ ಈ ನೀನಾಸಂ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ನಟರ ಆಂಗಿಕ ಅಭಿನಯ ಸೇರಿದಂತೆ ಎಲ್ಲವೂ ಶಿಸ್ತು ಬದ್ಧವಾಗಿ ಇರಲು ಮುಖ್ಯ ಕಾರಣ ನೀನಾಸಂನ ವೃತ್ತಿ ಪರತೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ಮಾತನಾಡಿ, ತುಮಕೂರಿನಲ್ಲಿ ಝೆನ್ ಟೀಮ್ ಹೊಸ ಅಲೆಯ ನಾಟಕಗಳನ್ನು ನೀಡುತ್ತಾ ಬಂದಿದೆ. ಅಲ್ಲದೇ ಝೆನ್ ಟೀಮ್ ಗೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಪ್ರತಿ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗುತ್ತದೆ. ಕಾರಣ ಝೆನ್ ಟೀಮ್ ನವರು ಆಯ್ಕೆ ಮಾಡಿಕೊಳ್ಳುವ ಕಥಾ ವಸ್ತು ವಿಭಿನ್ನವಾಗಿರುತ್ತದೆ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಕಳೆದ ೨ ದಶಕಗಳಿಗೂ ಹೆಚ್ಚು ಕಾಲ ತುಮಕೂರಿನಲ್ಲಿ ಉಗಮ ಶ್ರೀನಿವಾಸ್ ಝೆನ್ ಟೀಮ್ ಮೂಲಕ ರಂಗಭೂಮಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಕೇವಲ ಮನರಂಜನೆಗಷ್ಟೆ ಒತ್ತು ಕೊಡದೆ ಜನರ ಬೌದ್ಧಿಕ ಮಟ್ಟವನ್ನು ವಿಸ್ತರಿಸುವ ಕೆಲಸವನ್ನು ನಾಟಕಗಳ ಮೂಲಕ ಮಾಡುತ್ತಿದ್ದಾರೆ ಎಂದರು.
ಪಾಲಿಕೆ ನಿಕಟಪೂರ್ವ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ತುಮಕೂರು ಯಾವತ್ತೂ ಕೂಡ ನಾಟಕಗಳಿಗೆ ತವರೂರಾಗಿದೆ. ಇಲ್ಲಿ ಪ್ರತಿ ವಾರ ಒಂದಲ್ಲಾ ಒಂದು ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ನೀನಾಸಂ ಒಂದು ಪ್ರತಿಷ್ಠಿತ ರಂಗ ಸಂಸ್ಥೆಯಾಗಿದ್ದು ಸದುಭಿರುಚಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಕರ್ನಾಟಕದಲ್ಲೇ ಅತ್ಯಂತ ಮನೆ ಮಾತಾಗಿರುವ ನೀನಾಸಂ ಪ್ರತಿ ವರ್ಷ ವಿಭಿನ್ನ ಕಥೆಗಳನ್ನು ರಂಗಕ್ಕೆ ಅಳವಡಿಸಿ ರಾಜ್ಯಾದ್ಯಂತ ತಿರುಗಾಟ ಮಾಡುತ್ತಾ ಬಂದಿದೆ. ಹಲವಾರು ದಶಕಗಳಿಂದಲೂ ಕೂಡ ಕರುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಅದು ಹಿಗ್ಗಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಝೆನ್ ಟೀಮ್ ನ ಮುಖ್ಯಸ್ಥ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಅವರು, ತುಮಕೂರಿನಲ್ಲಿ ಝೆನ್ ಟೀಮ್ ಯಶಸ್ವಿಯಾಗಿ ೨ ದಶಕಗಳ ಕಾಲ ನಾಟಕಗಳನ್ನು ಆಯೋಜಿಸುತ್ತಾ ಬಂದಿರುವ ಹಿಂದೆ ತುಮಕೂರಿನ ಜನರ ಪ್ರೀತಿ ಪೂರ್ವಕ ಬೆಂಬಲವೇ ಕಾರಣ ಎಂದರು.ವೇದಿಕೆ ಕಾರ್ಯಕ್ರಮದ ಬಳಿಕ ಪಾದುಕ ಕಿರೀಟಿ ನಾಟಕ ಪ್ರದರ್ಶನಕೊಂಡಿತು.