ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಕೇಂದ್ರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಣಿಜ್ಯ ಮಳಿಗೆಯಲ್ಲಿ ಸೋಮವಾರ ನಡೆದ ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಂಗಳವಾರ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.ನಂತರ ಮಾತನಾಡಿದ ಅವರು, ವಾಣಿಜ್ಯ ಮಳಿಗೆಯಲ್ಲಿ ನಡೆದ ಭೀಕರ ಅಗ್ನಿ ಅವಘಡದಿಂದ ಅಪಾರ ಮೌಲ್ಯದ ವಸ್ತುಗಳು ಬೆಂಕಿಯಿಂದ ಭಸ್ಮವಾಗಿವೆ. ಮೋಹನ್ ಮೇಘರಾಜ್ ಅವರಿಗೆ ಸೇರಿದ ಬಣ್ಣದ ಅಂಗಡಿ ಸೇರಿದಂತೆ ಇತರೆ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ವೈಯಕ್ತಿಕವಾಗಿ ನೋವು ತರಿಸಿದೆ.
ಘಟನಾ ಸ್ಥಳದಲ್ಲಿ ಖುದ್ದಾಗಿ ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋಧಾ ವಂಟಗೋಡಿ ಅವರು ಹಾಜರಿದ್ದು, ಬೆಂಕಿ ನಂದಿಸಲು ಸಿಬ್ಬಂದಿಗೆ ಮಾರ್ಗದರ್ಶನ ನೀಡಿ, ಇನ್ನೂ ಹೆಚ್ಚಾಗಲಿದ್ದ ಅನಾಹುತ ತಪ್ಪಿಸಿ ಸುರಕ್ಷತಾ ಕಾರ್ಯ ಕೈಗೊಂಡಿದ್ದಾರೆ ಎಂದರು.ಬೆಂಕಿ ಅವಘಡದಿಂದ ನೊಂದ ಸಂತ್ರಸ್ತರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇನೆ. ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪರಿಹಾರ ನೀಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಅರುಣ್ ಅಪ್ಪುಶೆಟ್ಟಿ, ಗುರುರಾಜ ಹಲಿಗೇರಿ ಮುಖಂಡರಾದ ಶಿವರಡ್ಡಿ ಭೂಮಕ್ಕನವರ, ಶ್ರೀನಿವಾಸ ಗುಪ್ತಾ, ತಹಸೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಒ ದುಂಡಪ್ಪ ತುರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಅಗ್ನಿ ದುರಂತ; ಅಂಗಡಿಯ ಐವರು ಮಾಲೀಕರಿಂದ ದೂರು:ನಗರದ ಕೇಂದ್ರಿಯ ಬಸ್ ನಿಲ್ದಾಣದ ಎದುರು ಅಂಗಡಿಗಳಿಗೆ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಾಲೀಕರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರಿನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಸುಮಾರು ₹4,74,11,335 ನಷ್ಟವಾಗಿದೆ. ಪ್ರಕರಣ ಇನ್ನು ತನಿಖೆಯ ಹಂತದಲ್ಲಿದೆ.ಕೊಪ್ಪಳ ಹೃದಯ ಭಾಗದಲ್ಲಿನ ಕೇಂದ್ರಿಯ ಬಸ್ ನಿಲ್ದಾಣದ ಬಳಿ, ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದ ಮಳಿಗೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಪೇಂಟ್ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡು ಕ್ರಮೇಣ ಫ್ಲೈವುಡ್ ಅಂಗಡಿ, ಹಾರ್ಡವೇರ್ ಅಂಗಡಿಗೆ ತನ್ನ ಕೆನ್ನಾಲಿಗೆ ಚಾಚಿದ ಪರಿಣಾಮ ಅಂಗಡಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದಷ್ಟು ಸಾಮಗ್ರಿ ಸುಟ್ಟು ಕರಕಲಾಗಿವೆ. ಈ ಬೆಂಕಿ ನಂದಿಸಲು ಅಗ್ನಿಶಾಮಕ ತಂಡ, ಜೆಸ್ಕಾಂ, ನಗರಸಭೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಕೈಗಾರಿಕೆಗಳ ಅಗ್ನಿಶಾಮಕ ತಂಡವೂ ಹರಸಾಹಸ ಪಡುವಂತಾಯಿತು.
ಅಂಗಡಿ ಮಾಲೀಕರಾದ ತಾರಾನಾಥ ದಲಬಂಜನ್, ದೇವರಾಜ ಏರಿ, ಮೇಘರಾಜ ಸೋಮವಾರ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ತಮ್ಮ ಅಂಗಡಿಯಲ್ಲಿ ಬೆಂಕಿ ಅವಘಡದ ಕುರಿತು ದೂರು ನೀಡಿದರೆ, ಮಂಗಳವಾರ ರಾಜೇಶ ಮಡಿವಾಳರ, ಮಂಜುನಾಥ ತಟ್ಟಿ ದೂರು ನೀಡಿದ್ದಾರೆ. ಒಟ್ಟು ಈ ಅಗ್ನಿ ಅವಘಡದಲ್ಲಿ ಐವರು ಪ್ರತ್ಯೇಕ ದೂರು ನೀಡಿ ತಮ್ಮ ಹಾನಿಯ ಕುರಿತು ತಿಳಿಸಿದ್ದಾರೆ.