ತಮಿಳುನಾಡು ಮಾದರಿಯಲ್ಲೇ ಅಟೋರಿಕ್ಷಾಗಳ ಗೊಂದಲ ಬಗೆಹರಿಸಲು ಶಾಸಕ ಒತ್ತಾಯ

| Published : Sep 22 2024, 01:55 AM IST

ತಮಿಳುನಾಡು ಮಾದರಿಯಲ್ಲೇ ಅಟೋರಿಕ್ಷಾಗಳ ಗೊಂದಲ ಬಗೆಹರಿಸಲು ಶಾಸಕ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ತಮಿಳುನಾಡಿನಲ್ಲಿಯೂ ಇದೇ ರೀತಿಯ ಸಮಸ್ಯೆ ಉಂಟಾಗಿದ್ದಾಗ ಅಲ್ಲಿನ ಸರ್ಕಾರ ಗೊಂದಲವನ್ನು ಬಗೆಹರಿಸಲು ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಿ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸೂಕ್ತ ನಿರ್ಧಾರವನ್ನು ಕೈಗೊಂಡಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಪರ್ಮಿಟ್ ಹೊಂದಿರುವ ಹಾಗೂ ಬ್ಯಾಟರಿ ಚಾಲಿತ ರಿಕ್ಷಾಗಳ ನಡುವೆ ಉಂಟಾಗಿರುವ ಗೊಂದಲಗಳಿಗೆ ತಾರ್ಕಿಕ ಅಂತ್ಯ ನೀಡುವ ಉದ್ದೇಶದಿಂದ ಸ್ವತಃ ರಿಕ್ಷಾ ಚಾಲಕ-ಮಾಲೀಕರ ಅಸೋಸಿಯೇಷನ್‌ಗಳೇ ‘ತಮಿಳುನಾಡು ಮಾದರಿಯ’ ಪರಿಹಾರ ಸೂತ್ರವೊಂದನ್ನು ಸರ್ಕಾರದ ಮುಂದೆ ಇಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್‌ ಆಗ್ರಹಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿಗಳಾಗಿದ್ದ ರವಿಕುಮಾರ್ ರವರು ‘ಬ್ಯಾಟರಿ ಚಾಲಿತ ರಿಕ್ಷಾಗಳು ಮಂಗಳೂರು ನಗರದೊಳಗೆ ಪ್ರವೇಶಿಸುವಂತಿಲ್ಲ’ ಎಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಬ್ಯಾಟರಿ ಚಾಲಿತ ರಿಕ್ಷಾ ಎಸೋಸಿಯೇಷನ್ ಹಾಗೂ ಡೀಲಲ್‌ಗಳು ಹೈಕೋರ್ಟ್ ಮೊರೆ ಹೋಗಿದ್ದರು. ಪರಿಣಾಮ ಸುದೀರ್ಘ ವಾದ-ವಿವಾದಗಳ ನಂತರ ಅಂತಿಮವಾಗಿ ಹೈಕೋರ್ಟ್, ಈ ಹಿಂದಿನ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಪರಿಷ್ಕೃತ ಆದೇಶವನ್ನು ಹೊರಡಿಸುವಂತೆ ಈಗಿನ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಈ ಹಿಂದೆ ತಮಿಳುನಾಡಿನಲ್ಲಿಯೂ ಇದೇ ರೀತಿಯ ಸಮಸ್ಯೆ ಉಂಟಾಗಿದ್ದಾಗ ಅಲ್ಲಿನ ಸರ್ಕಾರ ಗೊಂದಲವನ್ನು ಬಗೆಹರಿಸಲು ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಿ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸೂಕ್ತ ನಿರ್ಧಾರವನ್ನು ಕೈಗೊಂಡಿತ್ತು. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಒಂದು ವಾರದೊಳಗೆ ತಮಿಳುನಾಡು ಮಾದರಿಯ ಕ್ರಮಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.