ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ

ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರ 52ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಮೆಚ್ಚಿನ ನಾಯಕನಿಗೆ ಶುಭ ಹಾರೈಸಿದರು.

ಮದ್ದೂರು ಮತ್ತು ಭಾರತಿನಗರ ಬ್ಲಾಕ್ ಕಾಂಗ್ರೆಸ್ ಹಾಗೂ ಉದಯ್ ಅಭಿಮಾನಿಗಳ ಬಳಗದಿಂದ ಬೆಳಗ್ಗೆ ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ ಶಾಸಕರ ಹೆಸರಿನಲ್ಲಿ ವಿಶೇಷ ಅರ್ಚನೆ, ಆಭಿಷೇಕ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು. ಉದಯ್ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ನಂತರ ಭಕ್ತರು, ಅಭಿಮಾನಿಗಳಿಗೆ ಪ್ರಸಾದ ವಿತರಿಸಿದರು.

ನಂತರ ಕೆ.ಎಂ.ದೊಡ್ಡಿ ​ಸರ್ಕಾರಿ ಆಸ್ಪತ್ರೆಯ ಸಾಮಾನ್ಯ ವಾರ್ಡ್, ಹೆರಿಗೆ ವಾರ್ಡ್ ಹಾಗೂ ಮಕ್ಕಳ ವಾರ್ಡ್‌ಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು-ಹಂಪಲು ಮತ್ತು ಬ್ರೆಡ್, ಹಾಲುಗಳನ್ನು ವಿತರಿಸಿದರು.

ಈ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಬಡ ರೋಗಿಗಳಿಗೆ ನೆರವಾಗಿ ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದೇವೆ ಎಂದರು.


ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ಎ.ಎಸ್.ರಾಜೀವ್ ಮಾತನಾಡಿ, ಮದ್ದೂರು ಕ್ಷೇತ್ರದ ಸರ್ವೋಮುಖ ಅಭಿವೃದ್ಧಿ ಶ್ರಮಿಸುತ್ತಿರುವ ಶಾಸಕ ಕೆ.ಎಂ ಉದಯ್ ಅವರಿಗೆ ಇನ್ನಷ್ಟು ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡುವಂತೆ, ಆಯಸ್ಸು, ಆರೋಗ್ಯ, ರಾಜಕೀಯದಲ್ಲಿ ಉನ್ನತ ಸ್ಥಾನ ದೊರೆಯುವಂತೆ ತಾಯಿ ಚಾಮುಂಡೇಶ್ವರಿ ದೇವಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತೈಲೂರು ಚೆಲುವರಾಜು, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಸಮಾಜ ಸೇವಕ ಕದಲೂರು ರವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮಾಜಿ ನಗರಸಭೆ ಅಧ್ಯಕ್ಷೇ ಕೋಕಿಲಾ ಅರುಣ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಮುಖಂದರಾದ ಸಿಪಾಯಿ ಶ್ರೀನಿವಾಸ, ಮಹೇಶ್, ಪುಟ್ಟರಾಮು ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್, ರಕ್ಷಾ ಸಮಿತಿ ಸದಸ್ಯರಾದ ಪ್ರಸಾದ್, ದೊಡ್ಡೇಗೌಡ ವೆಂಕಟೇಶ್, ವೀರೇಂದ್ರ, ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.