ನಚಿಕೇತನ ನಿಲಯ ವಸತಿ ಶಾಲೆಯನ್ನಾಗಿಸಲು ಕ್ರಮ

| Published : Apr 12 2025, 12:46 AM IST

ಸಾರಾಂಶ

ಕೋಲಾರ ನಗರದಲ್ಲಿ ಮುಂದಿನ ದಿನಗಳನ್ನು ಟಿ ಚನ್ನಯ್ಯ ಅವರ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಕನಸು ಇದೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಈ ಬಗ್ಗೆ ಪತ್ರವನ್ನು ಬರೆಯಲಾಗಿದೆ ಅವರು ಸಹ ಸ್ಪಂದನೆ ನೀಡಿದ್ದು ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ಅವರ ಹೆಸರಿನಲ್ಲಿ ವಸತಿ ಶಾಲೆ ಕಾಮಗಾರಿ ಪ್ರಾರಂಭಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಟಿ.ಚನ್ನಯ್ಯರ ಹಾದಿಯಲ್ಲಿ ಕ್ಷೇತ್ರದ ಜನತೆ ಋಣ ತೀರಿಸುವ ಕೆಲಸ ಮಾಡುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವುದೇ ನನ್ನ ಧ್ಯೇಯ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ನಗರದ ನಚಿಕೇತನ ನಿಲಯದ ಸುತ್ತಲೂ ಇರುವ ಕಾಂಪೌಂಡ್‌ಗೆ ಸುಮಾರು ೧ ಕೋಟಿ ವೆಚ್ಚದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಅಭಿವೃದ್ಧಿ ಕಾರ್ಯ ಇನ್ನೂ ಜೀವಂತ

ಟಿ.ಚನ್ನಯ್ಯ ಅವರು ಕೋಲಾರದ ಹೃದಯ ಭಾಗದಲ್ಲಿ ಸಮೃದ್ದಿಯಾಗಿ ಸ್ಥಳವನ್ನು ಉಳಿಸಿದ್ದಾರೆ. ಅದಕ್ಕೆ ನಾವುಗಳು ಹೈಟೆಕ್ ಸ್ಪರ್ಷ ನೀಡುವ ಮೂಲಕ ಅವರಿಗೆ ಗೌರವ ನೀಡುತ್ತೇವೆ. ಟಿ.ಚನ್ನಯ್ಯ ಅವರು ಕೋಲಾರದ ಮಹಾನ್ ವ್ಯಕ್ತಿ. ಅವರು ಮಾಡಿರುವ ಅಭಿವೃದ್ದಿ ಕೆಲಸಗಳು ಇಂದಿಗೂ ಜೀವಂತವಾಗಿದ್ದು ಈಗಲೂ ಜನರು ಅದನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ಚನ್ನಯ್ಯ ವಸತಿ ಶಾಲೆ

ಮುಂದಿನ ದಿನಗಳನ್ನು ಟಿ ಚನ್ನಯ್ಯ ಅವರ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಕನಸು ಇದೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಈ ಬಗ್ಗೆ ಪತ್ರವನ್ನು ಬರೆಯಲಾಗಿದೆ ಅವರು ಸಹ ಸ್ಪಂದನೆ ನೀಡಿದ್ದು ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ಅವರ ಹೆಸರಿನಲ್ಲಿ ವಸತಿ ಶಾಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನನ್ನ ಗುರಿ ಒಂದೇ ಅದು ಅಭಿವೃದ್ದಿ ಬೇರೆ ಆಸೆಗಳಿಲ್ಲ, ಶಾಶ್ವತವಾಗಿ ಇರುವ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶ. ನಚಿಕೇತನ ನಿಲಯದ ಸುತ್ತಲೂ ಇರುವ ಕಂಪೌಂಡ್ ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು, ಹೆಚ್ಚಿನ ಲಾಭ ನಿರೀಕ್ಷೆ ಮಾಡದೇ ಅಭಿವೃದ್ದಿ ಪಡಿಸಬೇಕು ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.ಕಾಂಪೌಡ್‌ ನವೀಕರಣಕ್ಕೆ ₹1 ಕೋಟಿ

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಇಂದು ವಿಶೇಷ ದಿನ, ೭೫ ವರ್ಷಗಳ ಹಿಂದೆ ದಿ. ಟಿ ಚನ್ನಯ್ಯ ಮಾಜಿ ಸಚಿವರಾಗಿ ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದವರು. ಅವರು ಉಳಿಸಿದ ಸ್ಥಳಕ್ಕೆ ಶಾಸಕರ ಶಿಫಾರಸ್ಸಿನ ಮೇರೆಗೆ ನಚಿಕೇತನ ನಿಲಯದ ಕಾಂಪೌಂಟ್ ನವೀಕರಣ ಕಾಮಗಾರಿಗೆ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.ಕಳೆದ ವರ್ಷ ೬ ಕೋಟಿ ರೂ ಅನುದಾನದಲ್ಲಿ ಅಂಬೇಡ್ಕರ್ ಹಾಸ್ಟೆಲ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೆವು ಇದೀಗ ಉದ್ಘಾಟನೆ ಸಿದ್ದವಾಗಿದೆ ಉದ್ಘಾಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಉದ್ಘಾಟನೆ ಮಾಡಲಾಗುತ್ತದೆ. ಐತಿಹಾಸಿಕ ಕಟ್ಟಡವಾಗಿರುವ ನಚಿಕೇತನ ನಿಲಯದಲ್ಲಿ ಈ ಹಿಂದೆ ೩೦೦ ಮಂದಿ ಮಕ್ಕಳು ವಸತಿಯನ್ನು ಪಡೆದುಕೊಳ್ಳುತ್ತಿದ್ದರು ಎಂದು ವಿವರಿಸಿದರು.

ಅನುದಾನ ಬಿಡುಗಡೆ ವಿಶ್ವಾಸ

ಮಾಲೂರು ತಾಲ್ಲೂಕಿನಲ್ಲಿರುವ ಮಾಸ್ತಿಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗರ್ ವಸತಿ ಶಾಲೆ ಮಾದರಿಯಲ್ಲಿ ಟಿ ಚನ್ನಯ್ಯ ವಸತಿ ಶಾಲೆ ಮಾಡಬೇಕು ಎಂದು ಮನವಿ ಮಾಡಲಾಗಿದ್ದು ಪತ್ರವನ್ನು ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ವಸತಿ ಶಾಲೆ ಕಾಮಗಾರಿಗೆ ಅನುದಾನ ಬಿಡಿಗಡೆಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದು.ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ದಲಿತ ಸಂಘಟನೆಯ ಮುಖಂಡರಾದ ಟಿ. ವಿಜಿಕುಮಾರ್, ಪಂಡಿತ್ ಮುನಿವೆಂಕಟಪ್ಪ ಬೆಳಗಾನಹಳ್ಳಿ ವೆಂಕಟಮುನಿಯಪ್ಪ ಇದ್ದರು.