ವಿಮೆ ಪರಿಹಾರದಲ್ಲಿ ಪಾರದರ್ಶಕತೆ ತೋರದ ಅಧಿಕಾರಿಗಳು, ಶಾಸಕ ಲಮಾಣಿ ಆರೋಪ

| Published : Aug 27 2025, 01:02 AM IST

ವಿಮೆ ಪರಿಹಾರದಲ್ಲಿ ಪಾರದರ್ಶಕತೆ ತೋರದ ಅಧಿಕಾರಿಗಳು, ಶಾಸಕ ಲಮಾಣಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆವಿಮೆ ನಿಗದಿಪಡಿಸುವಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಯಮ ಏನು? ಯಾವ ಮಾದರಿಯಲ್ಲಿ ಬೆಳೆ ಸಮೀಕ್ಷೆ ಮಾಡುತ್ತೀರಿ?

ಶಿರಹಟ್ಟಿ: ಬೆಳೆ ವಿಮೆಗೆ ರೈತರು ವೈಯಕ್ತಿಕವಾಗಿ ಪ್ರೀಮಿಯಂ ಹಣ ಪಾವತಿಸಿದರೂ ಅಧಿಕಾರಿಗಳ ಕೈಚಳಕದಿಂದ ಹಾಗೂ ಪಾರದರ್ಶಕತೆಯ ಕೊರತೆಯಿಂದ ಬೆಳೆ ನಷ್ಟಕ್ಕೆ ತಕ್ಕಂತೆ ಹಾಗೂ ವಾಸ್ತವ ಬೆಳೆಗೆ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಆರೋಪಿಸಿದರು.

ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆ ಮೇಲೆ ಚರ್ಚೆ ಆರಂಭಿಸಿದರು. ಖಾಸಗಿ ವ್ಯಕ್ತಿಗಳೇ ರೈತರ ಹೆಸರಿನಲ್ಲಿ ವಿಮೆ ಹಣ ಕಟ್ಟುತ್ತಿದ್ದಾರೆ. ಅಧಿಕಾರಿಗಳು ವಿಮಾ ಕಂಪನಿಯದೊಂದಿಗೆ ಶಾಮಿಲಾಗಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ದೂರಿದರು.

ಬೆಳೆವಿಮೆ ನಿಗದಿಪಡಿಸುವಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಯಮ ಏನು? ಯಾವ ಮಾದರಿಯಲ್ಲಿ ಬೆಳೆ ಸಮೀಕ್ಷೆ ಮಾಡುತ್ತೀರಿ? ವಿಮಾ ಕಂಪನಿ ರೈತರ ಹೆಸರಿನಲ್ಲಿ ಹಣ ತುಂಬುತ್ತಿರುವುದು ನಿಮ್ಮ ಗಮನಕ್ಕೆ ಇಲ್ಲವೇ? ಪ್ರತಿ ವರ್ಷ ಗೋಲ್‌ಮಾಲ್ ನಡೆಯುತ್ತಿದೆ. ರೈತರಿಗೆ ಕಿರುಕುಳ ಕೂಡ ಕೊಡುತ್ತಿರುವುದು ನಮ್ಮ ಗಮನಕ್ಕೆ ಇದೆ.ನಿಮ್ಮ ಪಾತ್ರವೇನು ಎಂದು ಕೃಷಿ ಇಲಾಖೆ ಅಧಿಕಾರಿ ರೇವಣಪ್ಪ ಮನಗೂಳಿ ಯವರನ್ನು ಸಾಲು ಸಾಲು ಪ್ರಶ್ನೆ ಕೇಳಿದರು.

ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳೇ ರೈತರ ಜಮೀನುಗಳಿಗೆ ತೆರಳಿ ಬೆಳೆದ ಬೆಳೆಯ ಸಮೀಕ್ಷೆ ಮಾಡಿ ವರದಿ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಲು ಆಗುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿ ರೇವಣಪ್ಪ ಮನಗೂಳಿ ಉತ್ತರಿಸುತ್ತಿದ್ದಂತೆ ನಿಮ್ಮ ಉತ್ತರ ಸಮರ್ಪಕವಾಗಿ ಇಲ್ಲ. ಹಾಗಿದ್ದರೆ ಬೆಳೆ ವಿಮೆ ಹಣದಿಂದ ರೈತರು ಏಕೆ ವಂಚಿತರಾಗುತ್ತಾರೆ ಎಂದು ಮರು ಪ್ರಶ್ನೆ ಮಾಡಿದರು.

ನೀವು ಉತ್ತರಿಸಲು ತಡವರಿಸುತ್ತಿದ್ದು, ಮೇಲ್ನೋಟಕ್ಕೆ ವಿಮಾ ಕಂಪನಿಯವರೊಂದಿಗೆ ಶಾಮಿಲಾಗಿರುವುದು ಗೊತ್ತಾಗುತ್ತಿದೆ. ನೀವು ಈ ಕ್ಷಣವೇ ಸಭೆಯಿಂದ ಹೊರ ಹೋಗುವಂತೆ ಸೂಚನೆ ನೀಡಿದರು. ಸಭೆಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಥವಾ ಉಪ ಕೃಷಿ ನಿರ್ದೇಶಕ ಬಂದು ಉತ್ತರಿಸುವಂತೆ ಸಭೆಯಲ್ಲಿ ಠರಾವ್ ಬರೆಸಿ ಅಧಿಕಾರಿಯನ್ನು ಹೊರ ಹಾಕಿದರು.

ಕ್ಷೇತ್ರದ ಬಾಲೇಹೊಸೂರ ಗ್ರಾಮದಲ್ಲಿ ರೈತರು ಬೆಳೆ ವಿಮೆ ತುಂಬಿದ್ದು, ನಿಜವಾದ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದ ಅವರು ಇಲಾಖೆ ಅಧಿಕಾರಿಗಳೇ ಮೂಲ ಸೂತ್ರದಾರರಾಗಿದ್ದು, ನಿಮ್ಮಿಂದಲೇ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದರು.

ತಾಲೂಕಿನ ಕೊಂಚಿಗೇರಿ ಗ್ರಾಮದಲ್ಲಿ ಈ ಬಾರಿ ಮೆಣಸಿನ ಕಾಯಿ ಹೆಚ್ಚು ಬೆಳೆದಿದ್ದಾರೆ. ಅತಿಯಾದ ಮಳೆಯಿಂದ ಬೆಳೆ ಕೈ ಸೇರದಂತಾಗಿದೆ. ರೈತರು ಈಗಾಗಲೇ ಬೆಳೆ ವಿಮೆ ಹಣ ತುಂಬಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ರೈತರಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳಬೇಕು ಎಂದರು.

ಬಾಲೇಹೊಸೂರ ಗ್ರಾಮದಲ್ಲಿ ರೇಷ್ಮೆ ಸಸಿ ಬೆಳೆಸಿರುವುದಾಗಿ ಎನ್‌ಆರ್‌ಇಜಿ ಯೋಜನೆ ಅಡಿಯಲ್ಲಿ ರೇಷ್ಮೆ ಇಲಾಖೆಯಿಂದ ₹೧ ಲಕ್ಷ ಬಿಲ್ ಪಡೆದಿರುವ ಬಗ್ಗೆ ಮಾಹಿತಿ ಇದೆ. ಆ ಹೊಲದಲ್ಲಿ ಬರೀ ಹುಲ್ಲು ಮಾತ್ರ ಇದೆ. ಅಧಿಕಾರಿಗಳು ರೈತರಿಗೆ ಹಣ ನೀಡಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಉಳಿದಂತೆ ವಿವಿಧ ಇಲಾಖೆಗಳ ಮೇಲೆ ಚರ್ಚೆ ನಡೆಯಿತು. ತಾಪಂ ಆಡಳಿತಾಧಿಕಾರಿ ಸಿ.ಆರ್.ಮುಂಡರಗಿ, ತಾಪಂ ಇಓ ರಾಮಣ್ಣ ದೊಡ್ಡಮನಿ ಸಭೆಯಲ್ಲಿ ಇದ್ದರು.