ಸಾರಾಂಶ
ತಾಲೂಕಿನ ದೇವಸಮುದ್ರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ₹9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಶಾಸಕ ಜೆ. ಎನ್. ಗಣೇಶ್ ಮಂಗಳವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಂಪ್ಲಿ
ತಾಲೂಕಿನ ದೇವಸಮುದ್ರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ₹9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಶಾಸಕ ಜೆ. ಎನ್. ಗಣೇಶ್ ಮಂಗಳವಾರ ಚಾಲನೆ ನೀಡಿದರು.ಈ ವೇಳೆ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್. ಗುಂಡಪ್ಪ ಮಾತನಾಡಿ, ಎಸ್ಸಿ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಘಟಕ ನಿರ್ಮಾಣ ಒಂದು ಶ್ಲಾಘನೀಯ ಹೆಜ್ಜೆ. ಆದರೆ ಇದರ ಜೊತೆಗೆ ವಿರುಪಾಕ್ಷಯ್ಯ ಮನೆಯಿಂದ ನೆಲ್ಲೂಡಿ ಮಸಾರಿ ತನಕ ರಸ್ತೆ ನಿರ್ಮಾಣ, ಕಾಲನಿಯೊಳಗಿನ ಒಳರಸ್ತೆಗಳ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣ ಕೂಡ ತಕ್ಷಣ ಅಗತ್ಯವಿದೆ. ಹಾಗೆಯೇ ಹುಲಿಗೆಮ್ಮ ಗುಡಿಮುಂಭಾಗದಲ್ಲಿ ಭಕ್ತರ ಸೌಲಭ್ಯಕ್ಕಾಗಿ ನೆರಳಿನ ಮೇಲ್ಚಾವಣಿ ನಿರ್ಮಿಸಿಕೊಡಬೇಕಾಗಿದೆ ಎಂದು ಒತ್ತಾಯಿಸಿದರು.
ಇದೇ ವೇಳೆ ಕಾಲನಿಯ ಮಹಿಳೆಯರಾದ ಹುಲಿಗೆಮ್ಮ, ಜಯಲಕ್ಷ್ಮಿ, ಶಾಂತಮ್ಮ, ರೇಣುಕಮ್ಮ, ಪಾರ್ವತಿ, ಚಲುವಾದಿ ಹೊನ್ನೂರಮ್ಮ ತಮ್ಮ ಬೇಡಿಕೆಯನ್ನು ಶಾಸಕರ ಮುಂದಿರಿಸಿ ಮಹಿಳಾ ಶೌಚಾಲಯ ಕಾಮಗಾರಿ ಮಧ್ಯದಲ್ಲಿ ನಿಂತು ಹೋಗಿರುವುದರಿಂದ ನಾವು ಬಯಲು ಶೌಚಕ್ಕೆ ಹೋಗುತ್ತಿದ್ದೇವೆ. ಇದು ಆರೋಗ್ಯ ಮತ್ತು ಗೌರವಕ್ಕೆ ಧಕ್ಕೆ. ಬಾಕಿ ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.ಗ್ರಾಮಸ್ಥರ ಮನವಿಗೆ ಶಾಸಕ ಜೆ. ಎನ್. ಗಣೇಶ್ ಪ್ರತಿಕ್ರಿಯಿಸಿ ಎಸ್ಸಿ ಕಾಲನಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು. ಕುಡಿಯುವ ನೀರಿನ ಘಟಕದಿಂದ ಕಾಲನಿಯ ದೀರ್ಘಕಾಲದ ಬೇಡಿಕೆ ಈಡೇರುವಂತಾಗಿದೆ. ಉಳಿದ ರಸ್ತೆ, ಸಮುದಾಯ ಭವನ ಮತ್ತು ಶೌಚಾಲಯ ಕಾಮಗಾರಿಗಳ ವಿಷಯದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಪ್ರಮುಖರಾದ ನಾಯಕರ ಹೊನ್ನೂರಪ್ಪ, ಅಶ್ಚಿ ತಿಪ್ಪೇಸ್ವಾಮಿ, ಕೆ. ಬಸವರಾಜ, ನಾಯಕ ವೆಂಕೋಬಾ, ಕುರಿ ನಾಗೇಂದ್ರ, ಕುಬೇರಾ, ಸಿ.ಆರ್. ಹನುಮಂತ, ಹೊನ್ನೂರಪ್ಪ, ಗುರುಶಾಂತಸ್ವಾಮಿ, ಸೂಗೂರು ಶೇಖಪ್ಪ, ಕೋರಿ ಚನ್ನಬಸವ, ಚಂದ್ರಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.