ಸಾರಾಂಶ
ಹಾನಗಲ್ಲ: ಉತ್ತಮ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿರುವ ಮಳಗಿ ಧರ್ಮಾ ಜಲಾಶಯಕ್ಕೆ ಬುಧವಾರ ಶಾಸಕ ಶ್ರೀನಿವಾಸ ಮಾನೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತೆರಳಿ ವಿಶೇಷ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಗುರುವಾರ ಬೆಳಗ್ಗೆ ಮಂತಗಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ, ಕಲ್ಲಹಕ್ಕಲ ಮೂಲಕ ೯ ಕಿ.ಮೀ. ದೂರ ಕ್ರಮಿಸಿ ಮಳಗಿ ಜಲಾಶಯ ತಲುಪಿದರು. ಝಾಂಜ್ ಸೇರಿದಂತೆ ವಿವಿಧ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು. ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು. ಕೊರಳಲ್ಲಿ ಹಸಿರು ಶಾಲು ಧರಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ನಾಡು ಮತ್ತು ದೇಶಭಕ್ತಿ ಗೀತೆಗಳು ರೋಮಾಂಚನಗೊಳಿಸಿದವು. ಬಳಿಕ ಜಲಾಶಯದಲ್ಲಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ ಅವರ ಜೊತೆಗೂಡಿ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಗಂಗಾಪೂಜೆ ನೆರವೇರಿಸಿದರು. ರೈತರು ಎದುರಿಸುತ್ತಿರುವ ಸಂಕಷ್ಟಗಳು ಕೊನೆಗಾಣಲಿ, ಉತ್ತಮ ಬೆಳೆ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಮಾನೆ, ಕಳೆದ ಬಾರಿ ಅನಾವೃಷ್ಟಿಯಿಂದ ರೈತರು ಸಂಕಷ್ಟ ಎದುರಿಸಿದ್ದಾರೆ. ಈ ಬಾರಿ ಉತ್ತಮ ಮಳೆ ಸುರಿದು ಹಾನಗಲ್ ತಾಲೂಕಿನ ಜೀವನಾಡಿ ಧರ್ಮಾ ಜಲಾಶಯ ಭರ್ತಿಯಾಗಿರುವುದರಿಂದ ಸಂಭ್ರಮ ಮೂಡಿದೆ. ಜಲಾಶಯ ಅಚ್ಚುಕಟ್ಟು ಪ್ರದೇಶದ ೯೮ ಕೆರೆಗಳು ತುಂಬುತ್ತಿದ್ದು, ೧೮ ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಯುತ್ತಿದೆ. ಸಹಜವಾಗಿ ತಾಲೂಕಿನ ರೈತರು ಸಂತಸಗೊಂಡಿದ್ದಾರೆ. ಹಾನಗಲ್ ನಗರದ ಕುಡಿಯುವ ನೀರಿನ ಮೂಲವಾಗಿರುವ ಆನಿಕೆರೆಯೂ ಜಲಾಶಯದಿಂದ ನೀರಿನಿಂದ ಭರ್ತಿಯಾಗಿದೆ. ಇಂಥ ಸಂದರ್ಭದಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿ, ರೈತರ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಧರ್ಮಾ ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಕೂಡ ಹಾನಗಲ್ ತಾಲೂಕಿನ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ. ಉತ್ತಮ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಉತ್ತಮ ಬೆಳೆಯೂ ರೈತರ ಕೈ ಸೇರಬೇಕಿದೆ. ದೇಶಕ್ಕೆ ಅನ್ನ ನೀಡುವ ರೈತರ ಬದುಕಿನಲ್ಲಿ ನೆಮ್ಮದಿ ಮೂಡಲಿ ಎಂದು ಹಾರೈಸಿದರು. ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಭದ್ರಾವತಿ, ಶಿವು ತಳವಾರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ಪುಟ್ಟಪ್ಪ ನರೇಗಲ್, ಈರಣ್ಣ ಬೈಲವಾಳ, ಅನಿತಾ ಶಿವೂರ, ಗೀತಾ ಪೂಜಾರ, ಮಮತಾ ಆರೆಗೊಪ್ಪ, ತಾಪಂ ಮಾಜಿ ಅಧ್ಯಕ್ಷರಾದ ಶಿವಬಸಪ್ಪ ಪೂಜಾರ, ಸಿದ್ದನಗೌಡ ಪಾಟೀಲ ಮೊದಲಾದವರಿದ್ದರು.