ಹಾನಗಲ್ಲ ತಾಲೂಕಿನ ರೈತರ ಜೀವನಾಡಿ ಎನಿಸಿರುವ ಧರ್ಮಾ ಜಲಾಶಯದಿಂದ ನೀರು ಹರಿಸುವ ಕಾಲುವೆ ಜಾಲ ಹೂಳೆತ್ತುವ ಹಾಗೂ ಜಂಗಲ್ ಕಟಾವು ಮಾಡುವ ೫೦ ಕೋಟಿ ರು. ವೆಚ್ಚದ ಕಾಮಗಾರಿಯನ್ನು ಗೆಜ್ಜಿಹಳ್ಳಿ ಬಳಿ ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿದರು.
ಹಾನಗಲ್ಲ: ತಾಲೂಕಿನ ರೈತರ ಜೀವನಾಡಿ ಎನಿಸಿರುವ ಧರ್ಮಾ ಜಲಾಶಯದಿಂದ ನೀರು ಹರಿಸುವ ಕಾಲುವೆ ಜಾಲ ಹೂಳೆತ್ತುವ ಹಾಗೂ ಜಂಗಲ್ ಕಟಾವು ಮಾಡುವ ೫೦ ಕೋಟಿ ರು. ವೆಚ್ಚದ ಕಾಮಗಾರಿಯನ್ನು ಗೆಜ್ಜಿಹಳ್ಳಿ ಬಳಿ ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿದರು.
ಕಾಮಗಾರಿ ಕುರಿತು ಸ್ಥಳದಲ್ಲಿದ್ದ ಬೃಹತ್ ನೀರಾವರಿ ಇಲಾಖೆಯ ಎಇಇ ಎನ್. ಗಿರೀಶ ಅವರಿಂದ ಅಗತ್ಯ ಮಾಹಿತಿ ಪಡೆದ ಶಾಸಕ ಮಾನೆ, ಮಹತ್ವಾಕಾಂಕ್ಷೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಅಚ್ಚುಕಟ್ಟಾಗಿ ಪೂರ್ಣಗೊಳಿಸಬೇಕು. ರೈತರ ಒತ್ತಾಸೆಯಂತೆ ಅಗತ್ಯ ಅನುದಾನ ದೊರಕಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಹರಿಯಬೇಕು. ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ನೀಡುವಂತೆ ಸೂಚಿಸಿದ ಅವರು ಏಪ್ರಿಲ್ ಹೊತ್ತಿಗೆ ಜನ, ಜಾನುವಾರುಗಳಿಗೆ ನೀರು ಒದಗಿಸಲು ಕಾಳಜಿ ವಹಿಸಬೇಕು ಎಂದರು.ಕಾಲುವೆಯಲ್ಲಿನ ಮಣ್ಣು ಫಲವತ್ತತೆಯಿಂದ ಕೂಡಿದೆ. ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಹೊಲಗಳಿಗೆ ಮಣ್ಣು ಒಯ್ಯುತ್ತಿದ್ದಾರೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಈ ಸಂದರ್ಭದಲ್ಲಿ ಎಇಇ ಎನ್. ಗಿರೀಶ್ ಮಾಹಿತಿ ನೀಡಿದರು. ಗೆಜ್ಜಿಹಳ್ಳಿ, ಡೊಳ್ಳೇಶ್ವರ ಭಾಗದ ಹಲವು ರೈತರು ಸ್ಥಳದಲ್ಲಿದ್ದರು.ಧರ್ಮಾ ಜಲಾಶಯದ ಕಾಲುವೆ ಹೂಳೆತ್ತಿ ಅಚ್ಚುಕಟ್ಟು ಪ್ರದೇಶಕ್ಕೆ ಸರಾಗವಾಗಿ ನೀರು ಹರಿಸಬೇಕು ಎನ್ನುವ ರೈತರ ಬಹುವರ್ಷಗಳ ಬೇಡಿಕೆ ಈಡೇರಿಸಲಾಗುತ್ತಿದೆ. ಒಟ್ಟು ೨೮ ಗ್ರಾಮಗಳ ವ್ಯಾಪ್ತಿಯ ೬೫ ಕಿ.ಮೀ. ಪ್ರದೇಶದ ಕಾಲುವೆ ಸ್ವಚ್ಛಗೊಳ್ಳುತ್ತಿದೆ. ಕಾಮಗಾರಿಯಿಂದ ನೀರಿನ ಪೋಲು ತಡೆಗಟ್ಟಿ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ಹರಿಯಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.