ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನ ಮಲ್ಲಿಪಟ್ಟಣ–ಕಟ್ಟೆಪುರ ಏತನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗಡಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.ಈ ವೇಳೆ ಮಾತನಾಡಿದ ಅವರು, ಕಾಮಗಾರಿ ಪ್ರಾರಂಭವಾದ 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ ಈಗಾಗಲೇ ಐದು ವರ್ಷಗಳಾದರೂ ಯೋಜನೆ ಮುಗಿಯದಿರುವುದು ವಿಷಾದಕರ ಸಂಗತಿ. ಆದರೆ ಕಳೆದ 5–6 ಸಭೆಗಳ ಪರಿಣಾಮವಾಗಿ ಈಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಉಳಿದ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕಾಲಮಿತಿಯ ಒಡಂಬಡಿಕೆ ಮಾಡಲಾಗಿದೆ ಎಂದು ತಿಳಿಸಿದರು. ಯೋಜನೆಯ ಒಟ್ಟು ಅಂದಾಜು ವೆಚ್ಚ ₹120 ಕೋಟಿ. ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತಕ್ಕೆ ಸುಮಾರು ₹120 ಕೋಟಿ ವೆಚ್ಚವಾಗಿದೆ. ಎರಡನೇ ಹಂತ ಕಾಮಗಾರಿಯು 77 ಕೋಟಿ ರು. ವೆಚ್ಚದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ತೀರ್ಮಾನವಾಗಿದೆ. ಕ್ಯಾಬಿನೆಟ್ನಲ್ಲಿಟ್ಟು ಅಂತಿಮಗೊಳಿಸಬೇಕು ಎಂದರು. ಮೊದಲ ಹಂತದ ಯೋಜನೆಯಲ್ಲಿ ಒಟ್ಟು 4 ಮೋಟಾರ್‌ಗಳಿದ್ದು, ಪ್ರತಿಯೊಂದು 1300 HP ಸಾಮರ್ಥ್ಯ ಹೊಂದಿದೆ. ಸುಮಾರು 0.387 TMC ನೀರನ್ನು ಬಳಕೆ ಮಾಡುವ ಗುರಿ ಹೊಂದಲಾಗಿದೆ.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿರುವ ಭರವಸೆಯಂತೆ ಕಾಮಗಾರಿಗಳ ಕಾಲಮಿತಿ ಹೀಗಿದೆ; ಜಾಕ್‌ವೆಲ್ – ಮಾರ್ಚ್ 31ರೊಳಗೆ, ರೈಸಿಂಗ್ ಮೇನ್ – ಏಪ್ರಿಲ್ 30ರೊಳಗೆ ಗ್ರಾವಿಟಿ ಮೇನ್ – ಮೇ 30ರೊಳಗೆ, ವಿದ್ಯುತ್ ಉಪಕೇಂದ್ರ ಮತ್ತು ಇತರ ಕಾಮಗಾರಿಗಳು – ಜೂನ್ 30ರೊಳಗೆ, ಜೂನ್ ಅಂತ್ಯದ ವೇಳೆಗೆ ಯೋಜನೆಯ ಟ್ರಯಲ್ ರನ್ ನಡೆಸಲು ಬದ್ಧತೆ ವ್ಯಕ್ತಪಡಿಸಿದ್ದಾರೆ. ಜೂನ್ ಅಂತ್ಯದೊಳಗೆ ರೈತರಿಗೆ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೊದಲ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಎರಡನೇ ಹಂತದ ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಶಾಸಕ ಎ.ಮಂಜು ಹೇಳಿದರು.ಈ ಸಂದರ್ಭದಲ್ಲಿ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಸತೀಶ್, ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ, ಇಇ ಪುಟ್ಟಸ್ವಾಮಿ, ಎಇಇ ದೀಪಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.