ನಿರಂಜನ್‌ ಕುಮಾರ ವಿರುದ್ಧ ಶಾಸಕ ಮಂಜುನಾಥ ಕಿಡಿ

| Published : Apr 17 2024, 01:17 AM IST

ಸಾರಾಂಶ

ಬಂಡೀಪುರ ಪ್ರವಾಸೋದ್ಯಮದ ಬಗ್ಗೆ ವಿಧಾನಸಭೇಲಿ ಕಳೆದ ಅವಧಿಯಲ್ಲಿನ ಶಾಸಕರು ಮಾತನಾಡಿದರೂ ಬಂಡೀಪುರ-ಎಲಚಟ್ಟಿ ರಸ್ತೆಗೆ ಅನುದಾನ ತರಲಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಟೀಕಿಸಿದರು.

ಕನ್ನಡಪ್ರಭವಾರ್ತೆ ಗುಂಡ್ಲುಪೇಟೆ

ಬಂಡೀಪುರ ಪ್ರವಾಸೋದ್ಯಮದ ಬಗ್ಗೆ ವಿಧಾನಸಭೇಲಿ ಕಳೆದ ಅವಧಿಯಲ್ಲಿನ ಶಾಸಕರು ಮಾತನಾಡಿದರೂ ಬಂಡೀಪುರ-ಎಲಚಟ್ಟಿ ರಸ್ತೆಗೆ ಅನುದಾನ ತರಲಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಟೀಕಿಸಿದರು.

ತಾಲೂಕಿನ ಮಂಗಲ, ಬಾಚಹಳ್ಳಿ, ಬೊಮ್ಮಲಾಪುರ, ಹುಂಡೀಪುರ ಗ್ರಾಪಂ ವ್ಯಾಪ್ತಿಯಲ್ಲಿ ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಳೆದ ಅವಧಿಯ ಮಾಜಿ ಶಾಸಕರು ಅನುದಾನ ತರದ ಕಾರಣ ದೇಶ, ವಿದೇಶದ ಪ್ರವಾಸಿಗರು ನಿಂದಿಸುತ್ತಿದ್ದಾರೆ ಇದಕ್ಕೆ ಕಾರಣ ಮಾಜಿ ಶಾಸಕರು ಎಂದು ವ್ಯಂಗವಾಡಿದರು.

ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಬೇಕಾದರೆ ರಸ್ತೆಗಳು ಚೆನ್ನಾಗಿರಬೇಕು. ಲೋಕಸಭೆ ಚುನಾವಣೆ ಮುಗಿದ ಬಳಿಕ ಬಂಡೀಪುರ-ಎಲಚಟ್ಟಿ ತನಕ ಹಾಗೂ ಬೆಳವಾಡಿ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆಯನ್ನು ನೀಡಿದರು. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆಗೂ ಮುನ್ನ ನೀಡಿದ್ದ ಐದು ಗ್ಯಾರಂಟಿ ಜಾರಿಗೆ ತಂದು ನುಡಿದಂತೆ ನಡೆದಿದೆ. ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಹಾಗೂ ಮುಖಂಡರು ಮಾಡಬೇಕು ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಬಗ್ಗೆ ವಿಪಕ್ಷದವರು ಅಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸೊಪ್ಪು ಹಾಕದೆ ಸುನೀಲ್‌ ಬೋಸ್‌ಗೆ ಹೆಚ್ಚು ಮತಗಳನ್ನು ಕೊಡಿಸುವ ಕೆಲಸ ಮಾಡಿದರೆ ನನಗೆ ಶಕ್ತಿ ಬರುತ್ತದೆ ಆಗ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ನಾನು ಶಾಸಕನಾದ ನಂತರ 100 ಕೋಟಿಗೂ ಹೆಚ್ಚುಅನುದಾನ ತಂದಿದ್ದೇನೆ. ಅಭಿವೃದ್ಧಿ ಕೆಲಸದಲ್ಲಿಯೂ ಕಾಂಗ್ರೆಸ್‌ ಸರ್ಕಾರ ಮುಂದಿದೆ ವಿಪಕ್ಷದವರು ಸುಳ್ಳನ್ನು ಸತ್ಯ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಚಾರ ಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಗುಂಡ್ಲುಪೇಟೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಪಂ ಮಾಜಿ ಸದಸ್ಯರಾದ ಹಂಗಳ ನಾಗರಾಜು, ಬಿ.ಕೆ.ಬೊಮ್ಮಯ್ಯ, ತಾಪಂ ಮಾಜಿ ಸದಸ್ಯ ಪುಟ್ಟಹನುಮಯ್ಯ, ಮುಖಂಡರಾದ ವಿಶ್ವನಾಥ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗಂಗಪ್ಪ ಸೇರಿದಂತೆ ಆಯಾಯ ಗ್ರಾಪಂ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.