ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಸ್ಥಾಪಿತ ಬಣದ ವತಿಯಿಂದ ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಕರ್ನಾಟಕ ದಲಿತ ರತ್ನ, ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರಿಗೆ ಕೊಡಗು ರತ್ನ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು. ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಡಾ. ಮಹದೇವಪ್ಪ, ದಲಿತರೆಲ್ಲರೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಹೋರಾಟ ನಡೆಸಬೇಕು. ಒಳ ಮೀಸಲಿನಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇನ್ನೂ ನಿಯಮಗಳು ರೂಪಿತವಾಗಿಲ್ಲ. ಹೀಗಿರುವಾಗ ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇದರ ವಿರುದ್ಧ ದಲಿತರು ಒಗ್ಗಟ್ಟಾಗಿ ಇದ್ದಾಗ ಮಾತ್ರ ಧ್ವನಿ ಎತ್ತಲು ಸಾಧ್ಯ ಎಂದರು.ದಲಿತರು ಇನ್ನೂ ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ. ಸಮಾನತೆ ಇನ್ನೂ ದೊರೆತಿಲ್ಲ. ಜಾತಿ ಪದ್ಧತಿ ಅಭಿವೃದ್ಧಿಯ ಮೇಲೆ ಸವಾರಿ ಮಾಡುತ್ತಿದೆ. ಈ ಹಂತದಲ್ಲಿ ದಲಿತ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಬೇಕು ಎಂದು ಕರೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮಾಡುವ ಸಂದರ್ಭದಲ್ಲಾದರೂ ಎಲ್ಲ ದಲಿತ ಸಂಘಟನೆಗಳೂ ಒಂದಾಗಿ ಬೃಹತ್ ಸಮಾವೇಶ ಏರ್ಪಡಿಸಬೇಕು. ಎಲ್ಲರೂ ಒಂದಾಗಬೇಕು ಎನ್ನುವುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಯಕೆಯಾಗಿತ್ತು ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕಟ್ಟಕಡೆಯ ವ್ಯಕ್ತಿ ತಲೆ ಎತ್ತಿ ಜೀವನ ನಡೆಸಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಮಾತ್ರವಲ್ಲ ಅದಕ್ಕಾಗಿ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ನಾವು ಸಂವಿಧಾನ ಅಧ್ಯಯನ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ನೆನೆಯಬೇಕು. ಐತಿಹಾಸಿಕ ಅನ್ಯಾಯ ಸರಿಪಡಿಸಲು ಸಮಾನತೆಗಾಗಿ ಅವರು ಹೋರಾಡಿದ್ದರು ಎಂದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಹೆಣ್ಣು ಮಕ್ಕಳು ಮುಂದೆ ಬರಬೇಕು, ಅವರಿಗೆ ಆದ್ಯತೆ ಕೊಡಬೇಕು.
ವಿದ್ಯಾರ್ಥಿವೇತನ ಸೇರಿ ದಲಿತರ ಅಭಿವೃದ್ಧಿಗಾಗಿನ ಇನ್ನಿತರ ಗುರಿಯನ್ನು ಜಿಲ್ಲೆಗೆ ಹೆಚ್ಚು ನೀಡಬೇಕು ಎಂದು ಮನವಿ ಮಾಡಿದರು.
ದಲಿತ ಸಂಘಟನೆಗಳನ್ನು ಒಂದು ಮಾಡುವ ಪ್ರಯತ್ನ ಮಾಡಬೇಕು. ಒಗ್ಗಟ್ಟು ಪ್ರದರ್ಶನ ಮುಖ್ಯ. ಸಚಿವರ ನೇತೃತ್ವದಲ್ಲಿ ಒಂದು ಸಭೆ ಕರೆದು ಒಂದು ಮಾಡುವ ಪ್ರಯತ್ನ ಮಾಡಲೇ ಬೇಕು ಎಂದರುಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ದೀಪಕ್ ಪೊನ್ನಪ್ಪ ಮಾತನಾಡಿದರು. ಮೇಘಾ ದೀಪಕ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಪರಿವರ್ತನಾ ಕಲಾ ತಂಡದವರು ಹಾಡುಗಳನ್ನು ಹಾಡಿದರು.
ಮುಡಾ ಅಧ್ಯಕ್ಷ ಬಿ.ವೈ. ರಾಜೇಶ್, ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎಲ್. ದಿವಾಕರ್, ಅಹಿಂದ ನಾಯಕ ಟಿ.ಪಿ. ರಮೇಶ್, ಮುಖಂಡರಾದ ಎಚ್.ವಿ. ದೇವದಾಸ್, ರಮೇಶ್ ಹೆಜ್ಜೂರು, ಇಸ್ಮಾಯಿಲ್, ಜಯಪ್ಪ ಹಾನಗಲ್, ಜಯೇಂದ್ರ, ಡಾ. ಸೌಮ್ಯ, ಎಂ. ಸೋಮಶೇಖರ್, ಶರೀನ್, ಮೋಹನ್ ಮೌರ್ಯ, ಸಂತೋಷ್ ಕುಮಾರ್, ಹಿರಿಯ ವಕೀಲ ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಇದ್ದರು.