ಮಡಿಕೇರಿಯಿಂದ ಗಾಳಿಬೀಡು, ಕಾಲೂರು, ವಣಚಲು, ಚಪ್ಪಂಡ ಕೆರೆ ಸೇರಿದಂತೆ ಹಲವು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಲೋಕೋಪಯೋಗಿ ರಸ್ತೆಯ ಕಾಮಗಾರಿ ವಿಳಂಬದ ವಿರುದ್ಧ ಶಾಸಕ ಡಾ. ಮಂತರ್ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ: ಮಡಿಕೇರಿಯಿಂದ ಗಾಳಿಬೀಡು, ಕಾಲೂರು, ವಣಚಲು, ಚಪ್ಪಂಡ ಕೆರೆ ಸೇರಿದಂತೆ ಹಲವು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಲೋಕೋಪಯೋಗಿ ರಸ್ತೆಯ ಕಾಮಗಾರಿ ವಿಳಂಬದ ವಿರುದ್ಧ ಶಾಸಕ ಡಾ. ಮಂತರ್ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುಮಾರು 25 ವರ್ಷಗಳಿಂದ ಈ ಭಾಗದ ಜನರ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಗೆ ಶಾಸಕರು ₹3.5 ಕೋಟಿ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. 2025ರ ನ.14ರಂದು ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿತ್ತು. ಕಾರ್ಯಾದೇಶದ ಪ್ರಕಾರ 2026ರ ಮೇ 28ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮುಂದಿನ ಹಂತಕ್ಕೆ ಹೆಚ್ಚುವರಿ ₹5 ಕೋಟಿ ಅನುದಾನ ನೀಡುವುದಾಗಿಯೂ ಶಾಸಕರು ಭರವಸೆ ನೀಡಿದ್ದರು.ಆರಂಭದಲ್ಲಿ ಕಾಮಗಾರಿ ವೇಗವಾಗಿ ಸಾಗಿತ್ತು. ಹಳೆಯ ರಸ್ತೆ ತೆರವು, ಮೋರಿ, ಸೇತುವೆ ಕಾಮಗಾರಿ ನಡೆದಿತ್ತು. ಆದರೆ ಶೇ.20ರಷ್ಟು ಕೆಲಸ ಪೂರ್ಣಗೊಂಡ ಬಳಿಕ ಕಾಮಗಾರಿ ದಿಢೀರ್ ಸ್ಥಗಿತಗೊಂಡಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇತ್ತೀಚೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕರು ಮಂಗಳವಾರ ಸಂಜೆ ಗಾಳಿಬೀಡು ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದರು.ಕಾಮಗಾರಿ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಜ.15ರೊಳಗೆ ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಗಡುವಿನೊಳಗೆ ಪೂರ್ಣಗೊಳ್ಳದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.