ಶಾಸಕ ಡಾ. ಮಂತರ್ ಗೌಡ ಅವರು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿ: ಎರಡು ದಿನದ ಹಿಂದೆ ದಾಖಲಾಗಿದ್ದ‌ ಗರ್ಭಿಣಿಯನ್ನು ವೈದ್ಯರಿಲ್ಲದ ಕಾರಣ ಚಿಕಿತ್ಸೆ ನೀಡದೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಶಾಸಕ ಡಾ. ಮಂತರ್ ಗೌಡ ಅವರು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಗು ಹೊಟ್ಟೆಯೊಳಗೆ ಮೃತಪಟ್ಟಿದೆ. ಆದರೆ ಜಿಲ್ಲಾಸ್ಪತ್ರೆಗೆ ಬಂದರೆ ಯಾವುದೇ ವೈದ್ಯರಿಲ್ಲ. ನಾವು ಏನು ಮಾಡಬೇಕು? ವೈದ್ಯರು ಬರುವುದಿಲ್ಲ ಎಂದರೆ ಆಗುವುದಿಲ್ಲ ಎಂದು ಹೇಳಬೇಕಿತ್ತು. ಮಗು ಹೊಟ್ಟೆಯೊಳಗೆ ಮೃತಪಟ್ಟಿದೆ. ತಾಯಿಗೆ ಏನಾದರೂ ಆದರೆ ಏನು ಮಾಡುವುದು? ಎರಡು ದಿನ ಬಂದರೂ ವೈದ್ಯರಿಲ್ಲ ಎಂದು ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರು ವಿಡಿಯೋ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶಾಸಕ ಡಾ. ಮಂತರ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಸಿದವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಹಾಗೂ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಬೇಕೆಂದು ಸೂಚನೆ ನೀಡಿದರು.