ಸಾರಾಂಶ
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ನಿಗಮ ಮಂಡಳಿ ಸಿಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿರುವುದನ್ನು ಕಾಂಗ್ರೆಸ್ ಮುಖಂಡ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ(ಕೊಣ್ಣೂರ) ಅವರ ನೇತೃತ್ವದಲ್ಲಿ ಫೌಂಡೇಶನ್ ಕಾರ್ಯಕರ್ತರು ಶನಿವಾರ ಸನ್ಮಾನಿಸಿ ಗೌರವಿಸಿದರು.ಈ ಸಮಯದಲ್ಲಿ ಮಾತನಾಡಿದ ಮುಖಂಡ ಸಿ.ಬಿ.ಅಸ್ಕಿ ಅವರು, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ರಾಜ್ಯದ ಹಿರಿಯ ಶಾಸಕರ ಪಟ್ಟಿಯಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ತಂದೆಯವರಾ ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿ ದಿ.ಬಿ.ಎಂ.ಪಾಟೀಲ ಅವರ ಜೊತೆಗೂಡಿ ಕೆಲಸ ಮಾಡಿದವರು. ಬಂಗಾರಪ್ಪ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದವರು. ೬ ಬಾರಿ ಶಾಸಕರಾಗಿ, ಸಚಿವರಾಗಿದ್ದವರು. ಅವರಿಗೆ ಸಚಿವ ಸ್ಥಾನ ಸಿಗುವ ಆಶಾ ಭಾವನೆ ಕಾರ್ಯಕರ್ತರಲ್ಲಿತ್ತು ಎಂದರು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಸಂದರ್ಭದಲ್ಲಿ ನಾಡಗೌಡರನ್ನು ಗೆಲ್ಲಿಸಿರಿ ಈ ಭಾರಿ ಮಂತ್ರಿ ಸ್ಥಾನ ಕೊಡುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದು ಸರಿಯಾದ ಕ್ರಮವಲ್ಲ. ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಈ ಸಮಯದಲ್ಲಿ ಅಸ್ಕಿ ಫೌಂಡೇಶನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ, ಶರಣುಧನಿ ದೇಶಮುಖ, ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ(ನಾವದಗಿ), ವಿಜಯಸಿಂಗ್ ಹಜೇರಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಬಸನಗೌಡ ಜೈನಾಪೂರ, ಮೈಹಿಬೂಬ ಕೇಂಭಾವಿ, ಶಿವನಗೌಡ ತಾಳಿಕೋಟಿ, ಸಂಗನಗೌಡ ಅಸ್ಕಿ, ಎ.ಡಿ.ಏಕೀನ್, ಮುಸ್ತಫಾ ಚೌದ್ರಿ, ಗೋಪಾಲ ಕಟ್ಟಿಮನಿ, ಆಶೀಫ್ ಕೇಂಭಾವಿ, ಅಶೋಕ ಬಿರಾದಾರ, ಮಡಿವಾಳ ಮಂಗಳೂರ, ಮೊದಲಾದವರು ಉಪಸ್ಥಿತರಿದ್ದರು.