ನುಡಿಕೆಫೆಯಲ್ಲಿ ಪುಸ್ತಕ ಖರೀದಿಸಿದರೆ ಕಾಫಿ ಟೀ ಉಚಿತ

| Published : Jan 29 2024, 01:33 AM IST

ಸಾರಾಂಶ

ನಾಡಿನ ಪ್ರಸಿದ್ಧ ಲೇಖಕರು ಸೇರಿದಂತೆ ಜಿಲ್ಲೆಯ ವಿವಿಧ ಲೇಖಕರ ಪುಸ್ತಕಗಳನ್ನು ನುಡಿಕೆಫೆಯಲ್ಲಿ ಇರಿಸಲಾಗಿದ್ದು, ಪುಸ್ತಕ ಖರೀದಿಸಿದರೆ ಕಾಫಿ ಅಥವಾ ಟೀ ಉಚಿತವಾಗಿ ನೀಡುವ ಮೂಲಕ ಓದುಗರನ್ನು ಪುಸ್ತಕದ ಕಡೆ ಆಕರ್ಷಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಕನ್ನಡ ನುಡಿಸಾಧಕರ ಸ್ಮರಣೆ ಹಾಗೂ ಕನ್ನಡ ಪುಸ್ತಕಗಳ ಮಾರಾಟಕ್ಕೆ ವಿನೂತನ ಸಾಹಸಕ್ಕೆ ಕೈ ಹಾಕಿರುವ ಬಳ್ಳಾರಿಯ ಯುವ ಸಾಹಿತಿಗಳ ಬಳಗ "ಕಾಫಿಯೊಂದಿಗೆ ಕನ್ನಡ ಪುಸ್ತಕಗಳು " ಘೋಷಣೆಯಡಿ ನಗರದ ತಾಳೂರು ರಸ್ತೆಯಲ್ಲಿ "ನುಡಿಕೆಫೆ " ಆರಂಭಿಸಿದ್ದಾರೆ.

ವ್ಯವಹಾರದಲ್ಲೂ ಕನ್ನಡ ಸ್ಮರಣೆಯಿರಬೇಕು. ಕನ್ನಡಕ್ಕೆ ಕೊಡುಗೆ ನೀಡಿದ ಪ್ರಾತಃಸ್ಮರಣೀಯರ ಪುಸ್ತಕಗಳನ್ನು ಮಾರಾಟ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಡಿನಾಡು ಬಳ್ಳಾರಿಯಲ್ಲಿ ಕನ್ನಡ ಪುಸ್ತಕ ಓದುವ ಗೀಳು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ನುಡಿಕೆಫೆ ಶುರುಗೊಂಡಿದೆ.

ನಾಡಿನ ಪ್ರಸಿದ್ಧ ಲೇಖಕರು ಸೇರಿದಂತೆ ಜಿಲ್ಲೆಯ ವಿವಿಧ ಲೇಖಕರ ಪುಸ್ತಕಗಳನ್ನು ನುಡಿಕೆಫೆಯಲ್ಲಿ ಇರಿಸಲಾಗಿದ್ದು, ಪುಸ್ತಕ ಖರೀದಿಸಿದರೆ ಕಾಫಿ ಅಥವಾ ಟೀ ಉಚಿತವಾಗಿ ನೀಡುವ ಮೂಲಕ ಓದುಗರನ್ನು ಪುಸ್ತಕದ ಕಡೆ ಆಕರ್ಷಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ.

ರೂಪುಗೊಂಡಿದ್ದು ಹೀಗೆ: ಜನರಿಗೆ ಓದಿನ ರುಚಿ ಹಚ್ಚಿಸಬೇಕು. ಇದಕ್ಕಾಗಿ ಕಾಫಿಯೊಂದಿಗೆ ಕನ್ನಡ ಪುಸ್ತಕ ಓದುವ ಗೀಳು ಶುರುಗೊಳಿಸಬೇಕು ಎಂಬ ಯೋಚನೆ ಮಾಡುತ್ತಾರೆ. ನಗರದ ಲೇಖಕರಾದ ಡಾ. ಅರವಿಂದ ಪಾಟೀಲ್, ವೀರೇಂದ್ರ ರಾವಿಹಾಳ್ ಹಾಗೂ ಅಜಯ್ ಬಣಕಾರ್ ಅವರು ಇದಕ್ಕೆ ಸಾಥ್ ನೀಡುತ್ತಾರೆ. ಅಂತೆಯೇ ನಗರದ ತಾಳೂರು ರಸ್ತೆಯಲ್ಲಿ ನುಡಿಕೆಫೆ ಹೆಸರಿನಲ್ಲಿ ಕಾಫಿ- ಟೀ ಸ್ಟಾಲ್ ಆರಂಭಗೊಳ್ಳುತ್ತದೆ.

ಇದು ವ್ಯವಹಾರಿಕವಾಗಿ ನಡೆಸುವ ಕೆಫೆ ಅಷ್ಟೇ ಅಲ್ಲ; ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ಮಹಾದಾಸೆಯಿದೆ. ನುಡಿಬಳಗವನ್ನು ಕಟ್ಟಿಕೊಂಡು ಕನ್ನಡದ ಕೆಲಸಗಳನ್ನು ಮಾಡಲು ನುಡಿಕೆಫೆಯನ್ನು ಕೇಂದ್ರವಾಗಿರಿಸಿಕೊಳ್ಳುವ ಮಹದಾಸೆಯಿದೆ ಎನ್ನುತ್ತಾರೆ ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳು.

ಉತ್ತಮ ಯೋಚನೆ: ಕನ್ನಡ ಪುಸ್ತಕಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿರುವ ನುಡಿಕೆಫೆಯನ್ನು ನಗರದ ಹಿರಿಯ ಸಾಂಸ್ಕೃತಿಕ ಚಿಂತಕ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಉದ್ಘಾಟಿಸಿದರು. ನುಡಿಕೆಫೆ ಹೆಸರಿನ ಮೂಲಕ ಕನ್ನಡ ಪುಸ್ತಕಗಳು ಓದುಗರಿಗೆ ತಲುಪಿಸುವ ಕಾರ್ಯ ಯಶಸ್ಸು ಕಾಣಲಿ ಎಂದು ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಲೇಖಕ ಡಾ. ಅರವಿಂದ ಪಾಟೀಲ್, ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಯುವ ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನುಡಿಕೆಫೆಯಲ್ಲಿ ಏನೇನಿದೆ?: ನುಡಿಕೆಫೆಯಲ್ಲಿ ಕನ್ನಡದ ಖ್ಯಾತ ಲೇಖಕರು ಹಾಗೂ ಬಳ್ಳಾರಿ ಜಿಲ್ಲೆಯ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ನುರಿತವರಿಂದ ಕಾಫಿ ಮತ್ತು ಟೀ ತಯಾರಾಗುತ್ತಿದ್ದು, ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ ಇಲ್ಲಿನ ಕಾಫಿ ಮತ್ತು ಟೀ ರುಚಿಯೇ ವಿಶಿಷ್ಟವಾಗಿದೆ. ಟೀ ಜತೆಗೆ ರಸ್ಕ್, ಬಿಸ್ಕೀಟ್ ಸಿಗಲಿದೆ.ಉದ್ದೇಶ: ನುಡಿಕೆಫೆಯನ್ನು ವ್ಯವಹಾರಿಕ ದೃಷ್ಟಿಯಿಂದ ಆರಂಭಿಸಿಲ್ಲ. ಕನ್ನಡದ ಪುಸ್ತಕಗಳು ಓದುಗರಿಗೆ ತಲುಪಿಸಬೇಕು. ಕನ್ನಡದ ಕೆಲಸಗಳಿಗೆ ನುಡಿಕೆಫೆಯನ್ನು ಕೇಂದ್ರವಾಗಿಟ್ಟುಕೊಳ್ಳಬೇಕು ಎಂಬ ಉದ್ದೇಶ ನಮ್ಮದು ಎಂದು ಲೇಖಕ ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.ಕನ್ನಡದ ಕೆಲಸ: ಗಡಿನಾಡು ಬಳ್ಳಾರಿಯಲ್ಲಿ ಕನ್ನಡದ ಕೆಲಸ ಮತ್ತಷ್ಟು ಚುರುಕುಗೊಳಿಸಬೇಕಾಗಿದೆ. ನುಡಿಕೆಫೆ ಮೂಲಕ ಸಣ್ಣದೊಂದು ಕನ್ನಡದ ಕೆಲಸ ಶುರುವಾಗಿದೆ. ಲೇಖಕರು ಜತೆಗೂಡಿ ಕೆಫೆ ಆರಂಭಿಸಿ, ಕನ್ನಡ ಪುಸ್ತಕಗಳನ್ನು ಓದುರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಲೇಖಕ ವೀರೇಂದ್ರ ರಾವಿಹಾಳ್.