ಸಾರಾಂಶ
ಅರಣ್ಯ ಹಾಗೂ ಕಂದಾಯ ಸಮಸ್ಯೆಯಿಂದ ಪ್ಲಾಟಿಂಗ್ ನಡೆಸದೆ ಅನೇಕ ಕಡತಗಳ ವಿಲೇವಾರಿಯಾಗದೆ ಬಾಕಿ ಇರುವ ವಿಚಾರವಾಗಿ ತಹಸೀಲ್ದಾರ್ ಜತೆ ಶಾಸಕ ಹರೀಶ್ ಪೂಂಜ ಮಾತುಕತೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕು ಆಡಳಿತದಲ್ಲಿ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ವಾರದ ಹಿಂದೆ ಭೇಟಿ ನೀಡಿದ್ದ ಶಾಸಕ ಹರೀಶ್ ಪೂಂಜ ಅವರು ಸೋಮವಾರ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ಬಾರಿ ದಿಡೀರ್ ಭೇಟಿ ಕೊಟ್ಟಿದ್ದ ಶಾಸಕರು ಸೋಮವಾರ ಅಕ್ರಮ ಸಕ್ರಮ ಸಮಿತಿ ಸಭೆ ಬಳಿಕ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಕಳಿಯ ಗ್ರಾಮದ ಗೇರುಕಟ್ಟೆ ಕೊಜಪ್ಪಾಡಿ ನಿವಾಸಿ ಸುಜಾತಾ ಅವರಿಗೆ ರೇಷನ್ ಕಾರ್ಡ್‌ಗೆ ಮಗುವಿನ ಹೆಸರು ಸೇರ್ಪಡೆ ವಿಳಂಬವಾಗುತ್ತಿರುವ ಬಗ್ಗೆ ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು. ಆಹಾರ ಇಲಾಖೆಗೆ ಭೇಟಿ ನೀಡಿದ ಶಾಸಕರು ಆಹಾರ ನಿರೀಕ್ಷಕರ ಬಳಿ ಈ ಬಗ್ಗೆ ವಿಚಾರಣೆ ನಡೆಸಿದರು. ಸರ್ವರ್ ಸಮಸ್ತೆ ಕುರಿತು ತಿಳಿಸಿದರು. ಬಳಿಕ ಸರ್ವರ್ ಸಮಸ್ಯೆ ಇಲ್ಲದವೇಳೆ ತಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಮನೆ ನಂಬರ್ ಸಿಗದ ವಿಚಾರವಾಗಿ ಅಳಲು ತೋಡಿಕೊಂಡ ಮಹಿಳೆಯ ಕುರಿತು ಗ್ರಾಮ ಒನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಹಾಗೂ ಇದಕ್ಕೆ ಸೂಕ್ತ ನೆರವಾಗುವಂತೆ ಕಚೇರಿ ಸಹಾಯಕರಿಗೆ ಶಾಸಕರು ತಿಳಿಸಿದರು. ಇದೇ ವೇಳೆ ಇನ್ನಿತರ ಕಡತಗಳನ್ನು ವಿಳಂಬವಾಗಿ ನೀಡುತ್ತಿರುವ ಕುರಿತು ಸಮಸ್ಯೆ ತಿಳಿಸಿದಾಗ ತಹಸೀಲ್ದಾರ್ ಜತೆ ಮಾತುಕತೆ ನಡೆಸಿ ತಕ್ಷಣ ನೀಡುವಂತೆ ಸೂಚಿಸಿದರು.ಶೌಚಾಲಯ ವೀಕ್ಷಣೆ: ಕಳೆದ ಬಾರಿ ಶಾಸಕರು ಶೌಚಾಲಯ ಹಾಗೂ ಮುಂಭಾಗ ದೂಳು, ಜೇಡರ ಬಲೆ ಕಟ್ಟಿದ್ದು ತೆರವಿಗೆ ಸೂಚಿಸಿದ್ದರು. ಆದರೆ ಸಮರ್ಪಕವಾಗಿ ಕಾರ್ಯ ನಡೆದಿದಿಯೇ ಎಂದು ಶೌಚಾಲಯಕ್ಕೆ ತಹಸೀಲ್ದಾರ್ ಕರೆದೊಯ್ದು ಈ ಮತ್ತೆ ವೀಕ್ಷಿಸಿದ ಶಾಸಕರು, ಮುಂದೆಯೂ ಇದೇ ರೀತಿ ಸ್ವಚ್ಛತೆ ಕಾಪಾಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಅರಣ್ಯ ಹಾಗೂ ಕಂದಾಯ ಸಮಸ್ಯೆಯಿಂದ ಪ್ಲಾಟಿಂಗ್ ನಡೆಸದೆ ಅನೇಕ ಕಡತಗಳ ವಿಲೇವಾರಿಯಾಗದೆ ಬಾಕಿ ಇರುವ ವಿಚಾರವಾಗಿ ತಹಸೀಲ್ದಾರ್ ಜತೆ ಮಾತುಕತೆ ನಡೆಸಿದರು.