ಸಾರಾಂಶ
ಕನ್ನಡಪ್ರಭ ವಾರ್ತೆ ಕಮಲನಗರ
ಔರಾದ (ಬಿ) ಶಾಸಕ ಪ್ರಭು.ಬಿ ಚವ್ಹಾಣ್ ಶನಿವಾರ ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ ರು.11 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಖೇರ್ಡಾದಿಂದ ಭಂಡಾರಕುಮಟಾವರೆಗೆ 380 ಲಕ್ಷ ಮೊತ್ತದ ರಸ್ತೆ ಕಾಮಗಾರಿ, ಕಮಲನಗರದಿಂದ ಚೊಂಡಿಮುಖೇಡ್‌ವರೆಗೆ 70 ಲಕ್ಷದ ರಸ್ತೆ ಹಾಗೂ ಹೊಳಸಮುದ್ರದಿಂದ ಹುಲಸೂರ್‌ವರೆಗೆ 70 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗೇಮಾ ತಾಂಡಾದಲ್ಲಿ 30 ಲಕ್ಷ, ಅಂಬ್ರು ತಾಂಡಾದಲ್ಲಿ 20 ಲಕ್ಷ, ಚೊಂಡಿಮುಖೇಡ್‌ನಲ್ಲಿ 163 ಲಕ್ಷ, ಪೂಮಾ ತಾಂಡಾದಲ್ಲಿ 38 ಲಕ್ಷ ಹಗೂ ವಾಗನಗೇರಾ ಗ್ರಾಮದಲ್ಲಿ 98 ಲಕ್ಷ, ಬೆಳಕೋಣಿಯಲ್ಲಿ 240 ಲಕ್ಷ ಹಾಗೂ ಪಾಂಡುತಾಂಡಾದಲ್ಲಿ 15 ಲಕ್ಷ ಮೊತ್ತದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಜನತೆಗೆ ಅನುಕೂಲವಾಗಲಿ ಎಂಬ ಕಾರಣದಿಂದ ಸರ್ಕಾರಗಳ ಮೇಲೆ ಒತ್ತಡ ಹೇರಿ ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಾರಣದಿಂದಾಗಿ ಕೆಲವೆಡೆ ಕೆಲಸಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಎಂಜಿನಿಯರ್‌ಗಳು ಕಚೇರಿಗಳಿಗೆ ಸೀಮಿತರಾಗದೆ ಕಾಮಗಾರಿ ಸ್ಥಳಗಳಿಗೆ ಓಡಾಡಬೇಕು.
ತಮ್ಮ ವ್ಯಾಪ್ತಿಯಲ್ಲಿನ ಕೆಲಸಗಳ ಮೇಲೆ ನಿಗಾ ವಹಿಸಬೇಕು. ಕಾಲಕಾಲಕ್ಕೆ ಗುತ್ತಿಗೆದಾರರಿಗೆ ಅಗತ್ಯ ಸಲಹೆ ಸೂಚನೆ ನೀಡುವ ಮೂಲಕ ಕೆಲಸ ಸರಿಯಾಗಿ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು. ಕಾಮಗಾರಿಗಳು ಕಳಪೆಯಾದಲ್ಲಿ ಯಾರನ್ನೂ ಬಿಡುವುದಿಲ್ಲವೆಂದು ಎಚ್ಚರಿಸಿದರು.ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಎಲ್ಲ ಉಪಕರಣಗಳನ್ನು ಬಳಕೆ ಮಾಡಬೇಕು. ಡಾಂಬರೀಕರಣ ಅಚುಕಟ್ಟಾಗಿ ಆಗಬೇಕು. ಸಿಸಿ ಕೆಲಸಗಳಿಗೆ ಸಮರ್ಪಕವಾಗಿ ಕ್ಯೂರಿಂಗ್ ಮಾಡಬೇಕು. ಎಲ್ಲಿಯಾದರೂ ಕಾಮಗಾರಿ ಕಳಪೆಯಾಗಿರುವುದು ಕಂಡುಬಂದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಮುಂದಾಗಬೇಕಾಗುತ್ತದೆ ಎಂದು ಖಡಕ್ಕಾಗಿ ಸೂಚಿಸಿದರು.
ಗ್ರಾಮ ಸಂಚಾರದ ವೇಳೆ ಶಾಸಕರು ಕೆಲವು ಗ್ರಾಮಗಳಲ್ಲಿ ಚಾಲ್ತಿಯಲ್ಲಿರುವ ಜಲ ಜೀವನ್ ಮಿಷನ್ ಹಾಗೂ ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಏನಾದರೂ ಕುಂದುಕೊರತೆಗಳು ಕಾಣಿಸಿದಲ್ಲಿ ನೇರವಾಗಿ ತಮ್ಮನ್ನು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಸರಿಯಾಗಿ ಆಗುವಂತೆ ಮುತುವರ್ಜಿ ವಹಿಸಬೇಕೆಂದು ಕೋರಿದರು.ಬಳತ್(ಕೆ) ನೀರಿನ ಘಟಕಕ್ಕೆ ಚಾಲನೆ:
ಬಳತ್(ಕೆ) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯಡಿ 15 ಲಕ್ಷ ಮೊತ್ತದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಪ್ರಭು ಚವ್ಹಾಣ್ ಲೋಕಾರ್ಪಣೆಗೊಳಿಸಿದರು. ಈ ವೇಳೆ ನೀರಿನ ಘಟಕವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದರು.ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಫೆ, ಸತೀಷ ಪಾಟೀಲ, ಯೋಗೇಶ ಪಾಟೀಲ, ರಾಜು ಶಳ್ಕೆ, ಸಂಜು ಮುರ್ಕೆ, ಉದಯ ಸೋಲಾಪೂರೆ, ಸಚಿನ್ ಬಿರಾದಾರ, ಮಾರುತಿ ವಾಡೇಕರ್, ರಾಹುಲ್ ಪಾಟೀಲ್, ರಾವಸಾಬ್ ಪಾಟೀಲ, ಭರತ್ ಕದಮ್, ನಾಗೇಶ ಪತ್ರೆ, ವಿಷ್ಣು ರುದ್ನುರೆ, ಶ್ರೀನಿವಾಸ ಖೂಬಾ, ಪ್ರದೀಪ ಪವಾರ್, ಹಣಮಂತ ಪಾಟೀಲ, ಪ್ರತಿಕ್ಷಾ ಪಾಟೀಲ, ಬಾಬುರಾವ ವಾಗ್ಮಾರೆ ಹಾಗೂ ಇತರರು ಉಪಸ್ಥಿತರಿದ್ದರು.