ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ವಿರುದ್ಧ ಲಘು ಹೇಳಿಕೆಗಳನ್ನು ನೀಡಿರುವುದರ ಜೊತೆಗೆ ಅಸಂವಿಧಾನಿಕ ಪದ ಬಳಸಿರುವ ಚಿಕ್ಕಬಳ್ಳಾಫುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್‌ರವರಿಗೆ ಮಾನಸಿಕ ಆರೋಗ್ಯ ತಪಾಸಣೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಶಾಸಕ ಪ್ರದೀಪ್ ಈಶ್ವರ್ ಅಸಂವಿಧಾನಿಕ ಪದ ಬಳಸಿರುವುದನ್ನು ಖಂಡಿಸಿದರು. ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಮೂಲಕ ಆಯೋಗಕ್ಕೆ ಮನವಿ ರವಾನಿಸಿದರು.
ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಶಾಸಕರಿಗೆ ಬಹುವಚನದ ಬಗ್ಗೆ ಪಾಠ ಮಾಡಬೇಕು. ಸಾರ್ವಜನಿಕವಾಗಿ ಅಸಂವಿಧಾನಕ ಪದ ಬಳಕೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ದಾಖಲಿಸಬೇಕು. ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಅವರ ಆರೋಗ್ಯದ ಬಗ್ಗೆ ವೈದ್ಯರು ಪ್ರಮಾಣಪತ್ರ ನೀಡುವವರೆಗೆ ಶಾಸಕ ಸ್ಥಾನದಿಂದ ಅಮಾನತ್ತಿನಲ್ಲಿಡುವಂತೆ ಒತ್ತಾಯಿಸಿದರು.ಪ್ರದೀಪ್ ಈಶ್ವರ್‌ಗೆ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕೆಂಬ ಅರಿವಿಲ್ಲ. ಚುನಾವಣಾ ಪ್ರಚಾರ ಹೇಗೆ ಮಾಡಬೇಕೆಂಬ ಬಗ್ಗೆ ತಿಳಿವಳಿಕೆಯೂ ಇಲ್ಲ. ಬಾಯಿಗೆ ಬಂದದ್ದೆಲ್ಲವನ್ನೂ ಮಾತನಾಡುವ ಪ್ರದೀಪ್ ಈಶ್ವರ್ ಅವರನ್ನು ಚುನಾವಣೆ ಮುಗಿಯುವವರೆಗೆ ಬಹಿರಂಗ ಸಭೆಯಲ್ಲಿ ಭಾಗವಹಿಸದಂತೆ ದಾವಣಗೆರೆ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಪಡಿಸಿದರು.
ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ನಾಗಾನಂದ್, ದೇವರಾಜು, ಯೋಗೇಶ್, ವರದರಾಜು ಸೇರಿ ಹಲವರು ಭಾಗಿಯಾಗಿದ್ದರು.ಗಾಂಧಿ ಉದ್ಯಾನವನ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿ ಪೂಜೆ
ಕನ್ನಡಪ್ರಭ ವಾರ್ತೆ ಮಂಡ್ಯಸರ್ಕಾರದ ಅಮೃತ್-2 ಯೋಜನೆಯಡಿ ನಗರದ ಉದ್ಯಾನವನಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಆರಂಭಿಕವಾಗಿ ನಗರಸಭೆ ಎದುರಿನ ಗಾಂಧಿ ಉದ್ಯಾನವನ ಅಭಿವೃದ್ಧಿಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಗರದ ಗಾಂಧಿ ಉದ್ಯಾನವನ, ಡಿವಿಕೆ ಉದ್ಯಾನವನ, ಹಾಲಹಳ್ಳಿ ಚೆನ್ನಯ್ಯ ಉದ್ಯಾನವನ ಅಭಿವೃದ್ಧಿಗೆ 1.8 ಕೋಟಿ ರು. ಬಿಡುಗಡೆ ಮಾಡಿದ್ದೇನೆ. ಈ ಹಣದಲ್ಲಿ ಉದ್ಯಾನವನಗಳ ತಡೆಗೋಡೆ ನಿರ್ಮಾಣ ಮಾಡಿ ಮಕ್ಕಳಿಗೆ, ವೃದ್ಧರಿಗೆ, ಸಾರ್ವಜನಿಕರಿಗೆ ಅನುಕೂಲ ಹಾಗುವ ಹಾಗೆ ವ್ಯವಸ್ಥಿತವಾಗಿ ನಿರ್ಮಿಸಲಾಗುವುದು ಎಂದರು.ಈಗಾಗಲೇ 26 ನೇ ವಾರ್ಡ್‌ನ ಚಲುವಯ್ಯ ಉದ್ಯಾನವನಕ್ಕೆ 1 ಕೋಟಿ ರು. ಹಣ ಬಿಡುಗಡೆ ಮಾಡಿ ಪಾರ್ಕ್ ಅಭಿವೃದ್ಧಿ ಮಾಡುತ್ತಿದ್ದೇವೆ. ಇನ್ನು ಕೆಲಸ ಇರುವುದರಿಂದ ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಹಣ ಬಿಡುಗಡೆ ಮಾಡಿ ಪಾರ್ಕ್‌ನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮಂಜು, ನಾಗೇಶ್, ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ನಗರಸಭೆ ಮಾಜಿ ಸದಸ್ಯರಾದ ಶ್ರೀಧರ್, ಹರೀಶ್, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಪಿ.ರುದ್ರಪ್ಪ, ಹೊಸಹಳ್ಳಿ ಶೇಖರ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಅಭಿಲಾಷ್, ಶ್ರೀಕಾಂತ್ ಉಪಸ್ಥಿತರಿದ್ದರು.