ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಧಾರವಾಡ ಜಿಲ್ಲೆಯ ವ್ಯಾಪಾರಸ್ಥರು, ವಿವಿಧ ಸಂಘಟನೆ ಮುಖಂಡರು, ಅಭಿಮಾನಿಗಳು, ನಗರದಲ್ಲಿ ಸೋಮವಾರ ಹಕ್ಕೊತ್ತಾಯ ಮಂಡಿಸಿದರು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಮೋಹನ ಲಿಂಬಿಕಾಯಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿ -ಧಾರವಾಡ ಮಹಾನಗರದಲ್ಲಿ ಜಾತ್ಯತೀತ ನಾಯಕರೆನಿಸಿದ್ದು, ಇಂಥವರು ಮಂತ್ರಿಗಳಾಗಬೇಕು ಎಂಬುದು ಜನರ ಆಶಯ. ಇದರಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ. ಇದು ಜಿಲ್ಲೆಯ ಜನತೆಯ ಹಕ್ಕೋತ್ತಾಯ ಆಗಿದೆ ಎಂದರು.ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಈ ಭಾಗದಿಂದ ಶಾಸಕ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಬಹು ದಿನಗಳ ಕೇಳಿ ಬರುತ್ತಿದೆ. ಇದಕ್ಕೆ ಈಗ ಸಮಯ ಕೂಡಿ ಬಂದಿದೆ. ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ, ವ್ಯಾಪಾರಸ್ಥ ಜಿ.ಎಂ. ಚಿಕ್ಕಮಠ, ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸುವ ಎಲ್ಲರಿಗೂ ಬೆಂಬಲಿಸುತ್ತ ಬಂದಿದ್ದೇನೆ. ಶಾಸಕ ಅಬ್ಬಯ್ಯ ಅವರ ಅಭಿವೃದ್ಧಿ ಚಿಂತನೆ ನೋಡಿರುವೆ. ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬುದು ನನ್ನ ಮನದಾಳದ ಮಾತು ಎಂದರು.ಹುಡಾ ಅಧ್ಯಕ್ಷ ಶಾಕೀರ್ ಸನದಿ, ಅನ್ವರ ಮುಧೋಳ, ಮಹೀಂದ್ರ ಸಿಂಘಿ, ರಾಜಶೇಖರ ಮೆಣಸಿನಕಾಯಿ, ವಸಂತ ಲದ್ವಾ, ಜೋನಾ ಬಸ್ಮೆ, ರಾಜಾ ದೇಸಾಯಿ, ಅಲ್ತಾಫ್ ಹಳ್ಳೂರ, ಮಹ್ಮದ ಯುಸೂಫ್ ಸವಣೂರು, ಗುರುನಾಥ ಉಳ್ಳಿಕಾಶಿ, ಎಂ.ಡಿ. ಗದಗಕರ, ಚಂದ್ರಶೇಖರ ಅಳಗುಂಡಿಗಿ, ಇಮ್ರಾನ್ ಯಲಿಗಾರ, ಜಗದೀಶ ಉಪ್ಪಿನ, ಗಣೇಶ ಟಗರಗುಂಟಿ, ತಾರಾದೇವಿ ವಾಲಿ, ಸ್ವಾತಿ ಮಾಳಗಿ, ಸುಧಾ ಮಣಿಕುಂಟ್ಲಾ, ರೇಣುಕಾ ಕಳ್ಳಿಮನಿ, ನಾಗರಾಜ ಗುರಿಕಾರ, ಮೋಹನ ಅಸುಂಡಿ, ಎಚ್.ಎಂ. ರಾಜು ಸೇರಿದಂತೆ ವೈದ್ಯರು, ಸಾಹಿತಿಗಳು ಅಬ್ಬಯ್ಯ ಅಭಿಮಾನಿಗಳಿದ್ದರು.