ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ 4ನೇ ದಿನವಾದ ಗುರುವಾರ ರಥೋತ್ಸವ ಲಕ್ಷಾಂತರ ಭಕ್ತರ ನಡುವೆ ಅತೀ ವಿಜೃಂಭಣೆಯಿಂದ ನಡೆಯಿತು. 2ನೇ ದಿನದ ರಥೋತ್ಸವಕ್ಕೆ ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.ನಗರದ ದ್ಯಾಮವ್ವ ದೇವಿಯ ದೇವಸ್ಥಾನದಿಂದ ಹಳೆ ಮುನ್ಸಿಪಾಲ್ಟಿ ಕಚೇರಿ, ಚಾವಡಿ ರಸ್ತೆ ಮಾರ್ಗವಾಗಿ ಒಂದು ರಥ ನಗರದ ಕ್ರೀಮ್ ಕಾರ್ನರ ವರೆಗೆ ತಲುಪಿತು. ಇನ್ನೊಂದು ರಥ ಅದೇ ರಥ ಬೀದಿಯ ಮೂಲಕ ಚೌಧರಿ(ಬಾಫನಾ)ಕೂಟವರೆಗೆ ತಲುಪಿತು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.ರಥೋತ್ಸವದ ಉದ್ದಕ್ಕೂ ಶ್ರೀ ಮಹಾಲಕ್ಷ್ಮೀದೇವಿಯ ಜಯಕಾರ ಘೋಷಣೆಗಳು ಮೊಳಗಿದವು. ವಿವಿಧ ವಾದ್ಯಮೇಳ ಹಾಗೂ ಕಲಾ ತಂಡಗಳು ಭಾಗಿಯಾಗಿದ್ದು ರಥೋತ್ಸವ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜಿಟಿ ಜಿಟಿ ಮಳೆಯಾಯಿತು. ಮಳೆಯಲ್ಲಿ ಮಹಿಳೆಯರು, ಯುವಕರು ರಥ ಬೀದಿಯಲ್ಲಿ ಕುಣಿದು ಕುಪ್ಪಳಿಸಿದರು. ರಥೋತ್ಸವದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಯುವ ನಾಯಕರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ ಜಾರಕಿಹೊಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಸದಸ್ಯರಾದ ಪ್ರಭಾಕರ ಚವ್ಹಾಣ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೇಪ್ಪ ಕಿತ್ತೂರ ಸೇರಿದಂತೆ ಅನೇಕರು ಇದ್ದರು.