ಸಾರಾಂಶ
ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎಂದೂ ನೆನಪಾಗದೆ ಇಂದು ನೆನಪಾಗಿವೆ.
ಕನ್ನಡಪ್ರಭ ವಾರ್ತೆ ಕುಕನೂರು
ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎಂದೂ ನೆನಪಾಗದೆ ಇಂದು ನೆನಪಾಗಿವೆ. ಮಾಡಲು ಬೇರೆ ಕಾರ್ಯವಿಲ್ಲದೆ ಸಂಘದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಟೀಕಿಸಿದರು.ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಮತ ಎಣಿಕೆ ಮಾಡದಿದ್ದಕ್ಕೆ ಭಾನುವಾರ ರಾತ್ರಿಯಿಂದ ಆರಂಭವಾದ ಪ್ರತಿಭಟನೆ ಸೋಮವಾರ ಸಹ ಮುಂದುವರೆಯಿತು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರ ಮೇಲೆ ಕಲ್ಲು ಹಾಕುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಹತ್ತಾರು ಬಲಿಯಾಗುತ್ತಿವೆ. ವಾಲ್ಮೀಕಿ, ಮುಡಾ ಹಗರಣ, ಸಚಿನ್ ಸಾವು ಇಂತಹ ಸರ್ಕಾರದಲ್ಲಿ ಸಹಕಾರ ಸಂಘದ ಚುನಾವಣೆಯ ಫಲಿತಾಂಶ ಘೋಷಣೆ ಮಾಡಲು ಶಾಸಕರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅವರಂತೆ ಆಡುತ್ತಿದ್ದಾರೆ. ಫಲಿತಾಂಶ ಘೋಷಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಮಾತನಾಡಿದರು.ಭಜನೆ:ಪ್ರತಿಭಟನೆ ವೇಳೆ ಭಾನುವಾರ ರಾತ್ರಿ ಇಡೀ ಭಜನೆ ಮಾಡುತ್ತಾ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಸೋಮವಾರ ಮಧ್ಯಾಹ್ನ ಸಹ ಭಜನೆಯಲ್ಲಿ ಭಾಗಿಯಾಗಿದ್ದರು. ರಾತ್ರಿ ಹೋರಾಟ ಹಿಂಪಡೆಯಲಾಯಿತು.
ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಮುಖಂಡ ಅನಿಲ್ ಆಚಾರ್, ಬಸವನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪೂರಮಠ, ಶಂಭು ಜೋಳದ್, ಕರಬಸಯ್ಯ ಬಿನ್ನಾಳ, ಸಿದ್ದಲಿಂಗಯ್ಯ ಬಂಡಿಮಠ, ಸಿ.ಎಚ್. ಪೋ.ಪಾಟೀಲ್, ಮಲ್ಲನಗೌಡ ಕೋನನಗೌಡ್ರ, ಬಸವರಾಜ ಗುಳಗುಳಿ, ಶರಣಪ್ಪ ರಾಂಪೂರ, ವೀರೇಶ ಸಬರದ್, ನಾಗಪ್ಪ ಕಲ್ಮನಿ, ಜಗದೀಶ ತೊಂಡಿಹಾಳ ಸೇರಿದಂತೆ ಅನೇಕರು ಇದ್ದರು.