ಸಾರಾಂಶ
ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಗಳು ಶಿವಲೀಲಾ ಹಾಗೂ ಸಂಡೂರು ಗ್ರಾಮದ ಮಂಜುನಾಥ ವಿರಾಪೂರ ಅವರ ಪುತ್ರ ಆಶೀಶ್ ಅವರ ವಿವಾಹ ಮರಗೂರ ಬಳಿಯ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.
ಇಂಡಿ : ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಗಳು ಶಿವಲೀಲಾ ಹಾಗೂ ಸಂಡೂರು ಗ್ರಾಮದ ಮಂಜುನಾಥ ವಿರಾಪೂರ ಅವರ ಪುತ್ರ ಆಶೀಶ್ ಅವರ ವಿವಾಹ ಮರಗೂರ ಬಳಿಯ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು. ಹಂಪಿ ವಿರೂಪಾಕ್ಷಿ ದೇವಾಲಯದ ಮಾದರಿಯಲ್ಲಿ ನಿರ್ಮಿಸಿದ ಸೆಟ್‌ನಲ್ಲಿ ವಿವಾಹ ಕಾರ್ಯಕ್ರಮ ವೈಭವೋಪೇರಿತವಾಗಿ ನಡೆಯಿತು.
ಇದಕ್ಕೂ ಮುಂಚೆ ಮಹಾರಾಷ್ಟ್ರದ ಸೋಲಾಪೂರದಲ್ಲಿ ಖಾಸಗಿ ಹೊಟೆಲ್‌ನಲ್ಲಿ ನಡೆಯುವ ದೇವರ ಅಕ್ಕಿಕಾಳ ಕಾರ್ಯಕ್ರಮವನ್ನು ರಾಜಮಹಾರಾಜ ಪದ್ಧತಿಯಂತೆಯೇ ನಡೆಸಲಾಯಿತು. ಮದುಮಗಳನ್ನು ಹೂವಿನ ಹಂದರದ ನೆರಳಿನಲ್ಲಿ ದೇವರ ಅಕ್ಕಿಕಾಳ ನಡೆಯುವ ಸ್ಥಳಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ದಂಪತಿ ಮಗಳನ್ನು ಕರೆತಂದರು.
ಬೆಳಿಗ್ಗೆ 8.30ರ ಸುಮಾರಿಗೆ ದೇವರ ಅಕ್ಕಿಕಾಳ ಕಾರ್ಯವನ್ನು ನೆರವೇರಿಸಲಾಯಿತು. ಬಳಿಕ, ಮಧ್ಯಾಹ್ನ 12.30 ಗಂಟೆಗೆ ಜಗದ್ಗುರು, ನಾಡಿನ ಶರಣರು, ಸಾಧು, ಸಂತರು, ಸ್ವಾಮೀಜಿ ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ನವಜೀವನಕ್ಕೆ ಕಾಲಿಟ್ಟರು. ಈ ಕಲ್ಯಾಣ ಮಹೋತ್ಸವಕ್ಕೆ ಮರಗೂರದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮೈದಾನ ಸಾಕ್ಷಿಯಾಯಿತು. ಮದುವೆ ಮಂಟಪ ಸಿಂಗಾರವನ್ನು ನೋಡಿದರೆ ಇಂದ್ರಲೋಕವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಅದ್ದೂರಿಯಾಗಿ ಅಷ್ಟೇ ಸಂಪ್ರದಾಯಿಕವಾಗಿ ಮುಹೂರ್ತದ ಪ್ರಕಾರ ಜಗದ್ಗುರುಗಳು, ಸ್ವಾಮೀಜಿಗಳು, ಶರಣರು ಸಚಿವರು, ಶಾಸಕರು, ವಿವಿಧ ಭಾಗದ ಗಣ್ಯರು, ಗುರುಹಿರಿಯರು ನವ ದಂಪತಿಯನ್ನು ಹರಿಸಿ ಹಾರೈಸಿದರು.
ಈ ಅದ್ಧೂರಿ ಸೆಟ್ ನಿರ್ಮಿಸಲು ಸುಮಾರು 3 ತಿಂಗಳಿನಿಂದ ತಯಾರಿ ನಡೆಸಲಾಗುತ್ತಿತ್ತು. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಈ ವಿವಾಹ ಬಂಧನಕ್ಕೆ ಸಾಕ್ಷಿಯಾಗಿದ್ದರು. ಇನ್ನು, ಮದುವೆಯಲ್ಲಿ ಭಕ್ಷ ಭೋಜನದ ರಾಶಿಯೇ ತಯಾರಾಗಿತ್ತು. ಬೆಂಗಳೂರು ಮೂಲದ 500 ಜನ ಬಾಣಸಿಗರು ಅಡುಗೆ ಕಾರ್ಯ, 1500 ಜನರು ಅಡುಗೆ ಬಡಿಸುವವರು, ಸ್ವಚ್ಚತೆಗಾರರು ಅಡುಗೆ ತಯಾರಿಸಿ ನೀಡಿದರು. ಇನ್ನು, ಭದ್ರತೆಗಾಗಿ 200 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಕಾಶಿ ಪೀಠದ ಜಗದ್ಗುರುಗಳು, ಇಂಡಿ, ಕತ್ನಳ್ಳಿ, ಹತ್ತಳ್ಳಿ, ತಡವಲಗಾ, ಆಲಮೇಲ ಮತ್ತು ಚಡಚಣ ಭಾಗದ ಎಲ್ಲ ಮಠಾಧೀಶರು ಆಗಮಿಸಿ ನವಜೋಡಿಗೆ ಆಶೀರ್ವದಿಸಿ, ಶುಭ ಕೋರಿದರು. ಸಚಿವರಾದ ಎಚ್.ಕೆ.ಪಾಟೀಲ, ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಶಾಸಕರಾದ ಅಶೋಕ ಮನಗೂಳಿ, ವಿಠ್ಠಲ ಕಟಕಧೋಂಡ, ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ರಮೇಶ ಭೂಸನೂರ ಸೇರಿ ಹಲವು ಗಣ್ಯಾತಿಗಣ್ಯರು ವಿವಾಹಕ್ಕೆ ಸಾಕ್ಷಿಯಾದರು.
ಜಿಲ್ಲೆಯ ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಸಿಪಿಐ ರವೀಂದ್ರ ನಾಯ್ಕೋಡಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಮದುವೆಗೆ ಆಗಮಿಸಿ ಶುಭ ಹಾರೈಸಿದಿರು. ವಿವಾಹ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು, 50ಕ್ಕೂ ಹೆಚ್ಚು ಸ್ವಾಮೀಜಿ, ಶರಣರು, ಸಾಧು, ಸಂತರು ಭಾಗವಹಿಸಿದ್ದರು.