ಶಾಸಕರ ಭರವಸೆ; ಧರಣಿ ಹಿಂಪಡೆದ ಅಥಣಿ ಪೌರಕಾರ್ಮಿಕರು

| Published : Oct 06 2024, 01:16 AM IST

ಸಾರಾಂಶ

ಅಥಣಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮೇಲೆ ವಕೀಲರೊಬ್ಬರು ನಡೆಸಿದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪುರಸಭೆ ನೌಕರರು ಹಾಗೂ ಪೌರಕಾರ್ಮಿಕರು ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮೇಲೆ ವಕೀಲರೊಬ್ಬರು ನಡೆಸಿದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪುರಸಭೆ ನೌಕರರು ಹಾಗೂ ಪೌರಕಾರ್ಮಿಕರು ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಶಾಸಕ ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಅಥಣಿ ಪುರಸಭೆಯ ಎಲ್ಲ ನೌಕರರ ಮತ್ತು ಪೌರಕಾರ್ಮಿಕರ ಮನದಾಳದ ನೋವು ನನಗೆ ಅರ್ಥವಾಗುತ್ತದೆ. ಸಾರ್ವಜನಿಕರ ಸೇವೆಗಾಗಿ ಕರ್ತವ್ಯ ನಿರ್ವಹಿಸಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿ ಮೇಲೆ ಯಾರೇ ಆಗಲಿ ಹಲ್ಲೆ ಮಾಡುವುದು ತಪ್ಪು. ಕಾನೂನಾತ್ಮಕವಾಗಿ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಅಥಣಿ ಪುರಸಭೆ ಮುಖ್ಯಾಧಿಕಾರಿ ಪ್ರಾಮಾಣಿಕ ಮತ್ತು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮೇಲೆ ಹಲ್ಲೆ ನಡೆಸಿರುವುದನ್ನು ನಾನು ಮತ್ತು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಖಂಡಿಸುತ್ತೇವೆ. ಅಥಣಿ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಿದ್ದಾರೆ. ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ಧರಿದ್ದು, ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ, ಧರಣಿ ಹಿನ್ನೆಲೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿರುವುದ್ದು, ಧರಣಿ ಕೈಬಿಟ್ಟು ಸೇವೆಗೆ ಹಾಜರಾಗಬೇಕು. ಅಥಣಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ತಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಮನವಿ ಮಾಡಿದರು.

ಪೌರಕಾರ್ಮಿಕರ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಮಾತನಾಡಿ, ಇಂತಹ ಹಲ್ಲೆ ಪ್ರಕರಣಗಳು ನಮ್ಮ ಮೇಲೆಯೂ ನಡೆಯುವ ಸಾಧ್ಯತೆಯಿದ್ದು, ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು. ಹಲ್ಲೆ ಮಾಡಿದ ವಕೀಲರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಮತ್ತು ಶಾಸಕರ ಹಾಗೂ ಅಧಿಕಾರಿಗಳ ಭರವಸೆಯ ಮೇರೆಗೆ ನಮ್ಮ ಅನಿರ್ದಿಷ್ಟ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ. ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದೆ ಹೋದರೆ ಮತ್ತೆ ಇದೇ ಸ್ಥಳದಲ್ಲಿ ಧರಣಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ, ಭುವನೇಶ್ವರಿ ಯಕ್ಕಂಚಿ ಸೇರಿದಂತೆ ಪುರಸಭೆ ಸದಸ್ಯರು, ತಹಸಿಲ್ದಾರ ಸಿದರಾಯ ಬೋಸಗೆ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ರವೀಂದ್ರ ನಾಯ್ಕೋಡಿ ಇತರರು ಇದ್ದರು.

ಪಟ್ಟಣದಲ್ಲಿ ಜಾಥಾ: ಪುರಸಭೆ ಅಧಿಕಾರಿಯ ಮೇಲಿನ ಹಲ್ಲೆಯ ಘಟನೆ ಖಂಡಿಸಿ ಪೌರಕಾರ್ಮಿಕರು ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಧ್ಯಾಹ್ನ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಅನ್ನ-ಸಾಂಬಾರ ತಯಾರಿಸಿ ಊಟ ಸವಿದರು.