ಸಾರಾಂಶ
ಜುಲೈ 7ರಂದು ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಮಹಾ ರಥೋತ್ಸವವು ಜರುಗಲಿದ್ದು, ಜಾತ್ರಾ ಮಹೋತ್ಸವ ಸಹ ದೇವಾಲಯದ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಸಲು ಈಗಾಗಲೇ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಾಲೆ ಕಲ್ಲು ಗ್ರಾಮಸ್ಥರನ್ನು ಸೇರಿ ತೀರ್ಮಾನ ಮಾಡಿದ್ದೇವೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಸುಕ್ಷೇತ್ರ ಮಾಲೆ ಕಲ್ ಅಮರಗಿರಿ ತಿರುಪತಿಯಲ್ಲಿ ದಾಸೋಹ ಮಂದಿರ ನಿರ್ಮಾಣಕ್ಕೆ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲೇಕಲ್ ತಿರುಪತಿ ಅಮರಗಿರಿಯಲ್ಲಿ ಶ್ರೀದೇವಿ, ಭೂದೇವಿ ಸಮೇತನಾಗಿ ನೆಲೆಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದರ್ಶನಕ್ಕೆ ನಿತ್ಯ ಸಹಸ್ರ ಭಕ್ತರು ಆಗಮಿಸುವುದರಿಂದ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ನಿತ್ಯ ದಾಸೋಹ ವ್ಯವಸ್ಥೆ ಮಾಡುವ ಸಂಕಲ್ಪ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ 50 ಲಕ್ಷ ರು. ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಂದಿನಿಂದ ಮೂರು ತಿಂಗಳ ಒಳಗೆ ದಾಸೋಹ ಭವನ ನಿರ್ಮಿಸಿ ಕೊಡುವಂತೆ ಅಲ್ಲೇ ಇದ್ದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ದಾಸೋಹ ಭವನ ನಿರ್ಮಾಣವಾಗುತ್ತಿದ್ದಂತೆ ಪ್ರತಿದಿನ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನಿರಂತರ ದಾಸೋಹ ವ್ಯವಸ್ಥೆ ಯಾವುದೇ ಅಡೆತಡೆ ಇಲ್ಲದೆ ನಡೆಯಲಿದೆ ಎಂದು ಹೇಳಿದರು.ಜುಲೈ 7ರಂದು ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಮಹಾ ರಥೋತ್ಸವವು ಜರುಗಲಿದ್ದು, ಜಾತ್ರಾ ಮಹೋತ್ಸವ ಸಹ ದೇವಾಲಯದ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಸಲು ಈಗಾಗಲೇ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಾಲೆ ಕಲ್ಲು ಗ್ರಾಮಸ್ಥರನ್ನು ಸೇರಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ತಹಸೀಲ್ದಾರ್ ಸಂತೋಷ್ ಕುಮಾರ್, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ನಾಗರಾಜ್, ತಿರುಪತಿ ಚಂದ್ರು, ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಮಾಜಿ ಅಧ್ಯಕ್ಷ ಗಿರೀಶ್, ನಗರ ಸಭೆ ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಧರ್ಮಶೇಖರ್, ದೇವಾಂಗ ಸಮಾಜದ ಮುಖಂಡ ರಂಗಣ್ಣ, ದೇವಾಲಯದ ಪಾರು ಪತ್ತೇದಾರ್ ಲೋಕೇಶಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಈಶ್ವರ್ ನಾಯ್ಕ, ರೇಣುಕಪ್ಪ ಸೇರಿ ಇತರರು ಉಪಸ್ಥಿತರಿದ್ದರು.