ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಸಂಚಾರ ಸುಗಮವಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.ತಾಲೂಕಿನ ಕಣಕಟ್ಟೆ ಹೋಬಳಿ ಹುಳಿಯಾರು, ಕೇರಳಾಪುರ ರಸ್ತೆಯಿಂದ ಕಸುವನಹಳ್ಳಿ ಮಾರ್ಗ ಪಡುವನಹಳ್ಳಿ ಗೊಲ್ಲರಹಟ್ಟಿ ಮತ್ತು ಪಡುವನಹಳ್ಳಿವರಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ರು.1ಕೋಟಿ.65 ಲಕ್ಷ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿದರು.
ಕೇವಲ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ರಸ್ತೆ ಬಳಕೆಗೆ ಸಿಗಬೇಕು ಹಾಗೂ ಇದರಿಂದ ಅಪಾರ ಮಂದಿಗೆ ಅನುಕೂಲ ಆಗಬೇಕು ಎಂಬ ಹಿತದೃಷ್ಟಿಯಿಂದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ತಮ್ಮ ಅವಧಿಯಲ್ಲಿ ಇಡೀ ತಾಲೂಕು, ಕ್ಷೇತ್ರದಾದ್ಯಂತ ಗುಣಮಟ್ಟದ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಕ್ಷೇತ್ರದ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಸಿಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು. ಅರಸೀಕೆರೆ ತಾಲೂಕು ಆರಂಭದಲ್ಲಿ ಬರದ ಹಣೆಪಟ್ಟಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಕುಡಿಯುವ ನೀರಿಗೆ ಸಮಸ್ಯೆ ತಾಂಡವವಾಡುವ ಮೂಲಕ ಜನರನ್ನು ಹೈರಾಣಾಗಿಸಿತ್ತು. ಸತತ ಹೋರಾಟದ ಫಲವಾಗಿ ಹೇಮಾವತಿ ಹಾಗೂ ಯಗಚಿಯಿಂದ ಇಡೀ ತಾಲೂಕಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗಿದೆ.
ಅಂತೆಯೇ ಮುಂದಿನ ವರ್ಷದೊಳಗೆ ಎತ್ತಿನಹೊಳೆ ಯೋಜನೆಯಿಂದಲೂ ತಾಲೂಕಿಗೆ ನೀರು ಹರಿದು ಬರುವುದು ಶತ ಸಿದ್ಧ, ಇದರಿಂದ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿ ಕುಡಿಯುವ ನೀರಿನ ಸಮಸ್ಯೆಯಾಗಲು, ಜಾನುವಾರುಗಳಿಗೂ ಯಾವುದೇ ರೀತಿಯ ತೊಂದರೆ ಆಗದು ಎಂದು ವಿಶ್ವಾಸದಿಂದ ನುಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮುಖಂಡರಾದ ಶಿವಣ್ಣ, ರಾಜಶೇಖರ, ನಾನಾನಾಯ್ಕ, ಸದಸ್ಯ ಸಿದ್ದಪ್ಪ, ಗ್ರಾಮಸ್ಥರಾದ ಸಿದ್ದಬಸಯ್ಯ, ರಂಗನಾಥ, ಇಲಾಖೆಯ ಎ.ಇ.ಇ ಮುನಿರಾಜು, ಗುತ್ತಿಗೆದಾರರಾದ ವೆಂಕಟೇಗೌಡ, ಗ್ರಾಮಸ್ಥರು ಹಾಜರಿದ್ದರು.