ಸಾರಾಂಶ
ನಮ್ಮ ವಕೀಲರೊಂದಿಗೆ ಚರ್ಚಿಸಿ ನಕಲಿ ಆಡಿಯೋ ಬಗ್ಗೆ ಪೊಲೀಸರಿಗೆ ದೂರು ನೀಡುವ ಬಗ್ಗೆ ಶೀಘ್ರ ನಿರ್ಧರಿಸುವೆ. ಜೆಡಿಎಸ್-ಬಿಜೆಪಿಯವರು ದೂರು ಕೊಡಲಿ, ಯಾವುದೇ ತನಿಖೆಯಾದ್ರೂ ನಡೆಯಲಿ, ಅದು ನನ್ನ ದನಿಯಲ್ಲ ಎಂದ ಮೇಲೆ ಹೆದರುವ ಪ್ರಶ್ನೆ ಇಲ್ಲ. ತನಿಖೆ ಎದುರಿಸುವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆಡಿಯೋಗೂ ನನಗೂ ಸಂಬಂಧ ಇಲ್ಲ. ಕುತಂತ್ರದಿಂದ, ರಾಜಕೀಯವಾಗಿ ನನ್ನ ತುಳಿದು ಶಕ್ತಿ ಕುಂದಿಸಲು, ಜನರ ಪ್ರೀತಿ-ವಿಶ್ವಾಸ ಕಡಿಮೆ ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಳೆದ ಲೋಕಸಭಾ ಚುನಾವಣೆ ವೇಳೆ ಹಣ ಹಂಚಿಕೆ ಬಗ್ಗೆ ನಾನು ಮಾತನಾಡಿದ್ದೇನೆ ಅನ್ನೋ ಆಡಿಯೋ ನನ್ನದಲ್ಲ, ಅದನ್ನು ಮಿಮಿಕ್ರಿ ಮಾಡಿ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಆಡಿಯೋ ನಕಲಿ, ನನ್ನ ವಿರುದ್ಧದ ರಾಜಕೀಯ ಸಂಚಿನಿಂದ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು. ಇದರ ಬಗ್ಗೆ ಅನುಮಾನ ಇದೆ. ಮಿಮಿಕ್ರಿ ಆಡಿಯೋ ಸೃಷ್ಟಿ ಮಾಡಿ ಹರಿಬಿಡಲಾಗಿದೆ. ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ, ನಾನಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದರು.ನನ್ನ ಮನೆಗೆ ನಿತ್ಯ ನೂರಾರು ಜನರು ಬರ್ತಾರೆ. ಈ ವೇಳೆ ಗ್ರಾಮೀಣ ಭಾಷೆಯಲ್ಲಿ ಲೋಕಾರೂಢಿಯಾಗಿ ನಾನು ಮಾತನಾಡುತ್ತೇನೆ. ಆಗ ನಾನು ಮಾತನಾಡಿದ್ದನ್ನು ತಿರುಚಲು, ನನ್ನ ದನಿ ಹೋಲುವುದನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಖಂಡಿತ ಅದರಲ್ಲಿರುವುದು ನನ್ನ ಮಾತುಗಳಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆ ನಡೆದು ೫ ತಿಂಗಳ ಬಳಿಕ, ಆಡಿಯೋ ಬಿಟ್ಟಿದ್ದಾರೆ ಎಂದರೆ ಅದರ ಹಿಂದೆ ದುರುದ್ದೇಶ ಅಡಗಿದೆ. ಆದರೆ ನಾನು ಹಣ ಹಂಚಿಕೆ ಪ್ರಸ್ತಾಪ ಮಾಡಿಲ್ಲ, ಯಾರ ಬಗ್ಗೆಯೂ ಮಾತನಾಡಿಲ್ಲ ಎಂದು ಹೇಳಿದರು.ಹಿಂದೆ ಕೂಡ ಇದೇ ರೀತಿಯ ಆಡಿಯೊ ಎಡಿಟ್ ಮಾಡಿ ವೈರಲ್ ಮಾಡಿದ್ದರು. ಇದರ ಹಿಂದೆ, ಇಂತಹುದನ್ನೇ ಪ್ರವೃತ್ತಿ ಮಾಡಿಕೊಂಡಿರುವ ಒಂದು ತಂಡವೇ ಇದೆ ಎಂಬ ಗುಮಾನಿ ಇದೆ. ಅವರ ಬಗ್ಗೆ ನಾನೇ ಸತ್ಯ ಶೋಧನೆ ಮಾಡುವೆ ಎಂದರು.
ಎಚ್ಚರ ವಹಿಸುವೆ: ಯಾರ ಬಳಿ ಹೇಗಿರಬೇಕು, ಏನು ಮಾತನಾಡಬೇಕು ಎಂದು ಎಚ್ಚರ ವಹಿಸುವೆ. ನನ್ನ ಭಾಷೆ ಒಬ್ಬೊಬ್ಬರಿಗೆ ಒಂದು ರೀತಿ ಕಾಣಬಹುದು, ಶಿವರಾಂ ಅವರ ಬಗ್ಗೆ ನಾನು ಕೇವಲವಾಗಿ ಮಾತನಾಡಿಲ್ಲ. ಹಳ್ಳಿ ಜನರ ಜೊತೆ ಮಾತಾಡುವಾಗ ನಾನು ಅದೇ ಭಾಷೆ ಬಳಸುವುದು ಸಾಮಾನ್ಯ ಎಂದರು. ಅಗತ್ಯ ಬಿದ್ದರೆ ಶಿವರಾಂ ಅವರ ಜೊತೆ ಮಾತನಾಡುವೆ ಎಂದರು. ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಯಾವಾಗಲೂ ಮಾತನಾಡಿದ್ದನ್ನು ಸೇರಿದ್ದಾರೆ ಎಂದರು. ನಾನು ಅಡ್ಡಿ ಪಡಿಸಿಲ್ಲ: ಇದೇ ವೇಳೆ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಕೆಲಸ ದಿನಗಳ ಹಿಂದೆ ನಡೆದ ವಾಗ್ವಾದ ವಿಚಾರವಾಗಿ ಪ್ರತಿಕ್ರಿಯಿಸಿ, ಗಣಪತಿ ಉತ್ಸವ ಇದ್ದ ಕಾರಣ ನಾನು ರಾತ್ರಿ ವೇಳೆ ಗ್ರಾಮಕ್ಕೆ ಹೋಗಿದ್ದೆ. ವೇದಿಕೆ ಹತ್ತಿದ ಕೂಡಲೇ ಕೆರೆಗೆ ನೀರು ಕೊಡಿ, ಯೋಜನೆ ಬದಲಿಸಲಾಗಿದೆ ಎಂದು ಕೆಲವರು ಕೂಗಿದರು. ಕಳೆದ ಬಾರಿ ೭ ಕೋಟಿ ವೆಚ್ಚದಲ್ಲಿ ಸಣ್ಣ ಪೈಪ್‌ಲೈನ್ ಅಳವಡಿಸಿ ಗ್ರಾಮ ಕೆರೆ ತುಂಬಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿತ್ತು. ಇತ್ತೀಚೆಗೆ ಅದೇ ಪೈಪ್‌ಲೈನ್‌ನಿಂದ ಬೇರೆ ಬೇರೆ ಕೆರೆ ತುಂಬಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ನೀರು ಸಾಕಾಗದ ಕಾರಣ ದೊಡ್ಡ ಅಳತೆಯ ಪೈಪ್ ಹಾಕಬೇಕು ಎಂದು ನಾನೇ ಹೇಳಿದ್ದೆ. ಈ ಸಂಬಂಧ ಕಳೆದ ಜನವರಿಯಲ್ಲಿ ಸಿಎಂಗೆ ಪತ್ರ ಸಹ ಬರೆದಿದ್ದೇನೆ. ಆದರೆ ಬೋರ್ಡ್ ಮೀಟಿಂಗ್ ಆಗಿಲ್ಲ. ಈ ನಡುವೆ ನೀರಾವರಿ ಉಪ ವಿಭಾಗವನ್ನು ಚನ್ನರಾಯಪಟ್ಟಣಕ್ಕೆ ವರ್ಗ ಮಾಡಲಾಗಿದೆ. ಇದೀಗ ಕೆಲಸ ನಡೆಯುತ್ತಿದೆ. ಬೋರ್ಡ್ ಮುಂದೆ ಅನುಮೋದನೆ ನಂತರ ಹೇಳೋಣ ಅಂದುಕೊಂಡಿದ್ದೆ. ಈ ನಡುವೆ ಗ್ರಾಮದ ಒಂದು ಸಂಘದವರು ಸಿಎಂ ಬಳಿ ಹೋಗಿ ಪತ್ರ ತಂದಿದ್ದಾರೆ. ಒಟ್ಟಿನಲ್ಲಿ ಯೋಜನೆ ಸಾಕಾರಗೊಂಡರೆ ನನ್ನದೇನು ತಕರಾರು ಇಲ್ಲ. ನಾನೇನು ಯೋಜನೆ ಬೇಡ ಎಂದು ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರು. ಕೆರೆ ತುಂಬಿಸೋದು ನನ್ನ ಕರ್ತವ್ಯ, ಅದನ್ನು ಮಾಡುವೆ, ಅವರೇ ಮಂಜೂರು ಮಾಡಿಕೊಂಡು ಬಂದರೂ ನಾನು ಬೇಡ ಅನ್ನಲ್ಲ ಎಂದರು.* ಬಾಕ್ಸ್: ನನ್ನ ದನಿಯಲ್ಲ ಎಂದ ಮೇಲೆ ಹೆದರುವ ಪ್ರಶ್ನೆ ಇಲ್ಲನಮ್ಮ ವಕೀಲರೊಂದಿಗೆ ಚರ್ಚಿಸಿ ನಕಲಿ ಆಡಿಯೋ ಬಗ್ಗೆ ಪೊಲೀಸರಿಗೆ ದೂರು ನೀಡುವ ಬಗ್ಗೆ ಶೀಘ್ರ ನಿರ್ಧರಿಸುವೆ. ಜೆಡಿಎಸ್-ಬಿಜೆಪಿಯವರು ದೂರು ಕೊಡಲಿ, ಯಾವುದೇ ತನಿಖೆಯಾದ್ರೂ ನಡೆಯಲಿ, ಅದು ನನ್ನ ದನಿಯಲ್ಲ ಎಂದ ಮೇಲೆ ಹೆದರುವ ಪ್ರಶ್ನೆ ಇಲ್ಲ. ತನಿಖೆ ಎದುರಿಸುವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆಡಿಯೋಗೂ ನನಗೂ ಸಂಬಂಧ ಇಲ್ಲ. ಕುತಂತ್ರದಿಂದ, ರಾಜಕೀಯವಾಗಿ ನನ್ನ ತುಳಿದು ಶಕ್ತಿ ಕುಂದಿಸಲು, ಜನರ ಪ್ರೀತಿ-ವಿಶ್ವಾಸ ಕಡಿಮೆ ಮಾಡಲು ಹೀಗೆ ಮಾಡಲಾಗುತ್ತಿದೆ. ಸಚಿವ ಆಗೋದು ಬಿಡೋದು ನನ್ನ ಹಣೆಯಲ್ಲಿ ಬರೆದಂತೆ ಆಗಲಿದೆ. ಅದನ್ನು ತಪ್ಪಿಸಲು ಹೀಗೆಲ್ಲಾ ಮಾಡುತ್ತಿರಬಹುದು ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.