ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸ್ವಯಂ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕ ಎಚ್. ಕೆ. ಸುರೇಶ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಜನಗಣತಿ ಕಾರ್ಯವನ್ನು ಸುಗಮವಾಗಿ ನಡೆಸಲು ಗ್ರಾಮಾಂತರ ಪ್ರದೇಶಗಳಲ್ಲಿ ತಹಸೀಲ್ದಾರ್‌ ಹಾಗೂ ನಗರ ಪ್ರದೇಶದಲ್ಲಿ ಪೌರಾಯುಕ್ತರು ಮೇಲ್ವಿಚಾರಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲು ಅಗತ್ಯ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ವಿವರಿಸಿದರು. ತಹಸೀಲ್ದಾರ್‌ ಶ್ರೀಧರ್‌ ಕಂಕನವಾಡಿ ಮಾತನಾಡಿ, ನಗರ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಬ್ಲಾಕ್‌ಗೆ ಗಣತಿದಾರರನ್ನು ನಿಯೋಜಿಸಲಾಗಿದೆ ಎಂದರು. ಏಪ್ರಿಲ್ 1ರಿಂದ 15ರವರೆಗೆ ಸಾರ್ವಜನಿಕರು ನಿರ್ದಿಷ್ಟ ಲಾಗಿನ್ ಮೂಲಕ ಸ್ವಯಂಘೋಷಿತವಾಗಿ ತಮ್ಮ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಸಾರ್ವಜನಿಕರು ನೀಡುವ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿ ಸಂರಕ್ಷಿಸಲಾಗುತ್ತದೆ. ಇದು ಭಾರತ ಸರ್ಕಾರದ ರಾಷ್ಟ್ರೀಯ ಕಲ್ಯಾಣ ಮತ್ತು ಜನಹಿತದ ಪ್ರಮುಖ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಏಪ್ರಿಲ್ 15ರಿಂದ ಮೇ 15ರವರೆಗೆ 342 ಗಣತಿದಾರರು ಹಾಗೂ ಸೂಪರ್‌ವೈಸರ್‌ಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಎಸಿ ಮಂಜುನಾಥ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಸೇರಿದಂತೆ ಹಲವರು ಇದ್ದರು.