ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಮೈಸೂರಿನಲ್ಲಿ ನಡೆದ ಬಿಜೆಪಿ - ಜೆಡಿಎಸ್ ಸಮಾವೇಶಕ್ಕೆ ಹಾಸನ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹೊರಟ ವಾಹನಗಳಿಗೆ ನಗರದ ಸಮೀಪ ಹೊಳೆನರಸೀಪುರ ರಸ್ತೆ ಬಳಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಪಕ್ಷದ ಬಾವುಟ ಪ್ರದರ್ಶಿಸಿ ಅಧಿಕೃತ ಚಾಲನೆ ನೀಡಿದರು. ಇದಾದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತು ಅವರ ಆಶೀರ್ವಾದದಲ್ಲಿ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಸಾರಥ್ಯದಲ್ಲಿ ಕಳೆದ ಒಂದು ವಾರದಿಂದ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಜೆಡಿಎಸ್ ಮತ್ತು ಬಿಜೆಪಿ ಪಕ್ಷವು ಒಗ್ಗಟ್ಟಿನಿಂದ ನಾವು ಪ್ರತಿಭಟನೆ ಮಾಡುವ ಮೂಲಕ ವಾಲ್ಮೀಕಿ ಹಗರಣ, ಮುಡಾ ಹಗರಣ ಹೀಗೆ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಉದ್ದಕ್ಕೂ ಭಾರಿ ಭ್ರಷ್ಟಾಚಾರ ಮಾಡುವ ಮೂಲಕ ರಾಜ್ಯದ ಜನರಿಗೆ ವಂಚಿಸಿದೆ ಎಂದರು.ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಆದುದರಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ, ಜೆಡಿಎಸ್ ನಡೆಸಿದ ಪಾದಯಾತ್ರೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಸುಮಾರು ೫ರಿಂದ ೭ ಸಾವಿರ ಜನ ಪಾಲ್ಗೊಂಡಿದ್ದಾರೆ ಎಂದರು. ನಾನು ಯಾರ ಬಗ್ಗೆಯೂ ಕೂಡ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಮುಖ್ಯವಾಗಿ ನಮಗೆ ಪಕ್ಷ ಮತ್ತು ಪಕ್ಷದ ಮುಖಂಡರು ಮುಖ್ಯ. ಎಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ, ರೇವಣ್ಣರು ನಮಗೆ ಯಾವ ರೀತಿ ಸೂಚನೆ ಕೊಡುತ್ತಾರೆ ಆ ಮೂಲಕ ನಡೆಯುತ್ತೇವೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆ ವಿಚಾರವಾಗಿ ಮಾತ್ರ ಮಾತನಾಡಲಾಗುವುದು ಎಂದು ಮಂಡ್ಯದಲ್ಲಿ ಜೆಡಿಎಸ್ ಬಿಜೆಪಿ ಸಮಾರಂಭದ ನಂತರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡರ ಪ್ಲೆಕ್ಸ್, ಬ್ಯಾನರ್ ಗಳಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ ಪ್ರಶ್ನೆಯೊಂದಕ್ಕೆ ಶಾಸಕರು ಈ ರೀತಿ ಉತ್ತರಿಸಿ ಪ್ರಶ್ನೆಗೆ ವಿರಾಮ ಹೇಳಿದರು. ಇದೇ ಸಂದರ್ಭದಲ್ಲಿ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಹಳ್ಳಿ ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮಾಧ್ಯಮ ವಕ್ತಾರ ರಘು ಹೊಂಗೇರೆ, ಜೆಡಿಎಸ್ ಮುಖಂಡರಾದ ವಾಸು, ಸೋಮು, ಅಪ್ಪಿ, ಲಕ್ಷ್ಮಣ್, ದಸ್ತಾಗಿರ್, ಕುಮಾರ್, ಪ್ರದೀಪ್, ಭಾನುಪ್ರಕಾಶ್ ಇತರರು ಉಪಸ್ಥಿತರಿದ್ದರು.