ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವೈಕುಂಠ ಏಕಾದಶಿಯ ಅಂಗವಾಗಿ ನಗರದ ಮಹಾರಾಜ ಪಾರ್ಕ್ ಬಳಿ ಇರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಬೆಳಗಿನಿಂದಲೇ ದೇವರಿಗೆ ವಿಶೇಷ ಪೂಜೆ-ಪುನಸ್ಕಾರ ನಡೆದು ಸಾವಿರಾರು ಭಕ್ತಾದಿಗಳು ಆಗಮಿಸಿ ಸ್ವರ್ಗದ ಬಾಗಿಲ ಒಳಗೆ ನುಸುಳಿ ಶ್ರೀ ಲಕ್ಷ್ಮೀವೆಂಕಟರಮಣನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ಇದೇ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಕೂಡ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಸ್ವರ್ಗದ ಬಾಗಿಲ ಮೂಲಕ ಹಾದುಹೋದರು.ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ವಿಷ್ಣು ಹಾಗೂ ವಿಷ್ಣುವಿನ ಅವತಾರದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಜನರ ನಂಬಿಕೆ. ವೈಕುಂಠ ಏಕಾದಶಿಯ ದಿನ ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ "ವೈಕುಂಠ ದ್ವಾರ " ಎಂಬ ವಿಶೇಷ ಪ್ರವೇಶವನ್ನು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಸಹ ಹೇಳಲಾಗುತ್ತದೆ.
ವೈಕುಂಠ ಏಕಾದಶಿ ವ್ರತವನ್ನು ಮಾಡುವವರು ಬೆಳಗ್ಗೆ ಬೇಗನೆ ಎದ್ದು ಪುಣ್ಯಸ್ನಾನ ಮಾಡಿ, ಉಪವಾಸ ಮಾಡುವ ಸಂಕಲ್ಪ ಮಾಡುತ್ತಾರೆ. ಈ ಏಕಾದಶಿ ವ್ರತವನ್ನು ಆಚರಿಸುವರು, ಧೂಪ ಮಾಡಿ ದೀಪ ಬೆಳಗಿಸಿ, ನೈವೇದ್ಯ ಮಾಡಿ ಬಳಿಕ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ವಿಶೇಷವಾಗಿ ಪೂಜಿಸುತ್ತಾರೆ. ಬಳಿಕ ವಿಷ್ಣು ಅಥವಾ ಆತನ ಅವತಾರದ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾವಿಷ್ಣುವಿಗೆ ಹೂವಿನ ಹಾರ, ನೈವೇದ್ಯ ಮತ್ತು ಬಾಳೆಹಣ್ಣು ಅರ್ಪಿಸುತ್ತಾರೆ. ವ್ರತ ಆಚರಿಸುವವರು ಕೊನೆಯಲ್ಲಿ ರಾತ್ರಿ ದೀಪದಾನ ಮಾಡುವುದು ಕೂಡ ಶ್ರೇಷ್ಠವಾಗಿದೆ. ವ್ರತದ ವೇಳೆ ಮಹಾವಿಷ್ಣುವಿನ ಮಂತ್ರ, ಶ್ರೀ ಹರಿ ಸ್ತೋತ್ರಂ, ವಿಷ್ಣು ಸಹಸ್ತ್ರನಾಮ ಮತ್ತು ಏಕಾದಶಿ ವ್ರತ ಕಥೆಯನ್ನು ಪಠಿಸುವುದರಿಂದ ವ್ರತ ಪೂರ್ಣಗೊಳ್ಳುತ್ತದೆ ಎಂಬುದು ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ. ಹಾಸನ ನಗರ ಹಾಗೂ ಜಿಲ್ಲೆಯಲ್ಲೂ ಕೂಡ ವೈಕುಂಠ ಏಕಾದಶಿಯ ಸಂಭ್ರಮ ಕಂಡು ಬಂದಿತು. ಹೀಗಾಗಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು.ಇದೇ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾಧ್ಯಮದೊಂದಿಗೆ ಮಾತನಾಡಿ, ವೈಕುಂಠ ಏಕಾದಶಿ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಸಂಜೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಸರ್ವರಿಗೂ ಆ ಭಗವಂತನು ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಬಂದ ಸಾವಿರಾರು ಭಕ್ತರಿಗೆ ಲಾಡು ರೂಪದಲ್ಲಿ ಪ್ರಸಾದ ಕೊಡಲಾಗುತ್ತಿದೆ ಎಂದರು. ಇದೇ ವೇಳೆ ವೈಕುಂಠ ಏಕಾದಶಿಯ ಶುಭಾಶಯ ಕೋರಿದರು.
ಸೀತಾರಾಮಾಂಜನೇಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಖಜಾಂಚಿ ಅನಂತರಾಮು, ಗಿರೀಶ್, ನಿರ್ದೇಶಕರಾದ ಅಶ್ವತ್, ರಕ್ಷಿತ್, ವೆಂಕಟಸುಬ್ಬಯ್ಯ, ನಟರಾಜು, ಇತರರು ಉಪಸ್ಥಿತರಿದ್ದರು.