ಕನಕಗಿರಿ: ಮಾತು ಎತ್ತಿದರೆ ಸಾಕು ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಶಾಸಕ ಶಿವರಾಜ ತಂಗಡಗಿ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬೇಕೆನ್ನುವುದನ್ನು ಯಲಬುರ್ಗಾ ಶಾಸಕ ರಾಯರೆಡ್ಡಿ ಅವರ ಬಳಿ ಹೋಗಿ ತರಬೇತಿ ಪಡೆದುಕೊಳ್ಳಲಿ ಎಂದು ಬಿಜೆಪಿ ಮುಖಂಡ ಗ್ಯಾನಪ್ಪ ಗಾಣದಾಳ ಕುಟುಕಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಿವರಾಜ ತಂಗಡಗಿ ಮತ್ತೆ ಸಚಿವ ಸ್ಥಾನ ಸಿಗಲಿ ಎಂದು ಹೈಕಮಾಂಡ್ ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟೀಕಿಸುತ್ತಿದ್ದಾರೆ. ಕ್ಷೇತ್ರದಲ್ಲಿ 7.5 ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿರುವ ತಂಗಡಗಿಯವರು ಏನು ಅಭಿವೃದ್ಧಿ ಮಾಡಿದ್ದಾರೆ? ಕೆಲ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿ ಆರೆಂಟು ತಿಂಗಳಾದರೂ ಕೆಲಸ ಆರಂಭಿಸಿಲ್ಲ. ಕನಕಗಿರಿಯಿಂದ ಗುಡದೂರು ಗ್ರಾಮದ ವರೆಗಿನ ರಸ್ತೆ ಕಾಮಗಾರಿಗೆ ತರಾತುರಿಯಲ್ಲಿ ಭೂಮಿಪೂಜೆ ನೆರವೇರಿಸಿದ್ದು, ಅಭಿವೃದ್ಧಿಗೆ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಹೋಗಿವೆ. ಪಟ್ಟಣದ ಬಸ್ ನಿಲ್ದಾಣದಲ್ಲಿನ ಶೌಚಾಲಯ ನಿರುಪಯುಕ್ತವಾಗಿದೆ. ಪಟ್ಟಣದ ಅಭಿವೃದ್ಧಿ ಅನುದಾನವಿಲ್ಲ. ಎಸ್ಸಿ, ಎಸ್ಟಿ ವರ್ಗದ ವಿದ್ಯಾರ್ಥಿಗಳ ಪುಸ್ತಕ ಖರೀದಿಗೆ ಹಣ ನೀಡದಿರುವುದು ಸೇರಿದಂತೆ ನಾನಾ ಸಮಸ್ಯೆಗಳು ತಂಗಡಗಿಯವರ ಕಣ್ಣಿಗೆ ಕಾಣುತ್ತಿಲ್ಲ. ವಾರದೊಳಗೆ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಾಗೀಶ ಹಿರೇಮಠ ಹಾಗೂ ಮುಖಂಡ ನಿಂಗಪ್ಪ ನಾಯಕ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ನೂರು ಕೋಟಿ ಅನುದಾನ ಮೃತಪಟ್ಟವರ ಬ್ಯಾಂಕ್ ಖಾತೆಗೆ ಹೋಗಿದೆ ಎನ್ನುವುದಾದರೆ ಕಾಂಗ್ರೆಸ್ ಸರ್ಕಾರ ಮತ್ತು ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎನ್ನುವುದು ಮೇಲ್ನೊಟಕ್ಕೆ ಕಾಣುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮುಖಂಡರಾದ ಶಿವಾನಂದ ಹೊಂಕಲಕುಂಟಿ, ಲಿಂಗಪ್ಪ ಪೂಜಾರ, ಕನಕಪ್ಪ ಯಾದವ, ರಂಗಪ್ಪ ಕೊರಗಟಗಿ, ಸುರೇಶಪ್ಪ ಗುಗ್ಗಳಶೆಟ್ರ, ಹನುಮಂತ ಬಸರೀಗಿಡ, ಶೇಷಪ್ಪ ಪೂಜಾರ ಇದ್ದರು.


ಕಳೆದ ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರ ಪವರ್ ಶೇರಿಂಗ್ ವಿಷಯದಲ್ಲಿ ಕಾಲಹರಣ ಮಾಡಿದೆ. ಈಗ ಶಿವರಾಜ ತಂಗಡಗಿಯವರು ಮೋದಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ಟೀಕಿಸುವ ಮೂಲಕ ಮಂತ್ರಿಯಾಗಲು ಹೊರಟಿದ್ದಾರೆ. ಮೂರು ವರ್ಷದಲ್ಲಿ ತಂಗಡಗಿ ಅಭಿವೃದ್ಧಿ ಶೂನ್ಯ. ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗುತ್ತಿಲ್ಲ. ಇತಿಹಾಸ ಪ್ರಸಿದ್ಧ ವೆಂಕಟಪತಿ ಬಾವಿ ಅಭಿವೃದ್ಧಿಗೆ ಮಂಜೂರಾದ ಕೋಟಿ ರೂ. ಅವ್ಯವಹಾರವಾಗಿದೆ ಈ ಬಗ್ಗೆ ಶಾಸಕರು ಮಾತನಾಡಲಿ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಕಾಶ ಹಾದಿಮನಿ ತಿಳಿಸಿದ್ದಾರೆ.