ಮಳೆ ಸಂತ್ರಸ್ತರ ನೋವು ಆಲಿಸಿದ ಶಾಸಕ ವೀರೇಂದ್ರ ಪಪ್ಪಿ

| Published : May 14 2024, 01:08 AM IST

ಸಾರಾಂಶ

ಶಾಸಕ ವೀರೇಂದ್ರ ಪಪ್ಪಿ ಸೋಮವಾರ ಚಿತ್ರದುರ್ಗ ಹೊರವಲಯದ ಮಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಮಳೆ, ಗಾಳಿಯಿಂದಾಗಿ ಹಾನಿಗೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಳೆ, ಗಾಳಿಯಿಂದ ಹಾನಿಗೊಳಗಾದ ಕುಟುಂಬಗಳ ನೋವು ಆಲಿಸಲು ಶಾಸಕ ವೀರೇಂದ್ರ ಪಪ್ಪಿ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಸೋಮವಾರ ಚಿತ್ರದುರ್ಗ ಹೊರವಲಯ ಮಲ್ಲಾಪುರ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಹಾನಿ ಪ್ರಮಾಣ ಖುದ್ದು ವೀಕ್ಷಿಸಿದರು. ಅಗತ್ಯ ಪರಿಹಾರ ಕ್ರಮಕ್ಕೆ ಅಧಿಕಾರಿಳಿಗೆ ಸೂಚನೆ ನೀಡಿದರು.

ಎರಡು ದಿನಗಳ ಹಿಂದೆ ಬೀಸಿದ ಬಿರುಗಾಳಿ, ಮಳೆಯಿಂದಾಗಿ ಬಾಪೂಜಿ ಶಾಲೆಯ ಮೇಲ್ಚಾವಣಿ ಗ್ರಿಲ್ ಹಾರಿ ಹೋಗಿ ಬೇರೊಂದು ಮನೆಗಳ ಮೇಲೆ ಬಿದ್ದಿದ್ದವು. ಪರಿಣಾಮ ಮಲ್ಲಾಪುರ ಗ್ರಾಮದ ಡಾ.ಅಂಬೇಡ್ಕರ್ ಕಾಲೋನಿಯಲ್ಲಿ ಒಂದಿಬ್ಬರಿಗೆ ಗಾಯಗಳಾಗಿದ್ದವು. ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಹಾನಿಗೊಳ ಗಾದ ಕುಟುಂಬಗ ಬಳಿಗೆ ತೆರಳಿದ ಶಾಸಕ ವೀರೇಂದ್ರ ಪಪ್ಪಿ ತಂತ್ರಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಕೂಡಲೇ ಪರಿಹಾರ ಹಣವನ್ನು ನೊಂದವರ ಖಾತೆಗಳಿಗೆ ಜಮಾ ಆಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಲಾಪುರ ಡಾ.ಅಂಬೇಡ್ಕರ್ ಕಾಲೋನಿಯಲ್ಲಿ ಮೂರು ಮನೆಗಳು ಪೂರ್ಣ ಹಾಳಾಗಿದ್ದು, 1.20 ಲಕ್ಷ ರು ಪರಿಹಾರ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳ ಫಲಾನುಭವಿಗಳಿಗೆ 11.400 ರು ಪರಿಹಾರದ ಮೊತ್ತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಯಿತು.

ಮನೆಗಳಿಗೆ ಹಾನಿಗೊಳಗಾದ ವೇಳೆ ಶಾಸಕ ವೀರೇಂದ್ರ ಪಪ್ಪಿ ಪ್ರವಾಸದಲ್ಲಿದ್ದರು. ಹಾಗಾಗಿ ಅವರ ಸಹೋದರ ಕೆ.ಸಿ.ನಾಗರಾಜ್ ಅಧಿಕಾರಿಗಳೊಂದಿಗೆ ಮಲ್ಲಾಪುರ ಗ್ರಾಮಕ್ಕೆ ಆಗಮಿಸಿ ಸಂತ್ರಸ್ತರ ಯೋಗ ಕ್ಷೇಮ ವಿಚಾರಿಸಿದ್ದರು. ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಭೇಟಿ ನೀಡಿದ ವೇಳೆ ತಹಸೀಲ್ದಾರ್ ನಾಗವೇಣಿ, ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಲೆಕ್ಕಾಧಿಕಾರಿ ಯಶೋಧಮ್ಮ ಸೇರಿದಂತೆ ಹಲವು ಉಪಸ್ಥಿತರಿದ್ದರು.

ವಿದ್ಯುತ್ ಕಂಬಗಳಿಗೆ ಹಾನಿ: ಮಳಿಯಿಂದಾಗಿ ಹೊಳಲ್ಕೆರೆ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಹಲವಾರು ಮರಗಳು ಉರುಳಿ ಬಿದ್ದಿವೆ. ಅರಸನಗಟ್ಟ ಹಾಗೂ ಚಿಕ್ಕಂದವಾಡಿ ಗ್ರಾಮಗಳಲ್ಲಿ ಎರಡು ವಿದ್ಯುತ್ ಪರಿವರ್ತಕ ಉರುಳಿ ಬಿದ್ದಿವೆ. ಚಿಕ್ಕಂದವಾಡಿಯಿಂದ ಅರಸನಗಟ್ಟ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಅಡಿಕೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿವೆ. ಕೊಡಗಳ್ಳಿ ಗ್ರಾಮದಲ್ಲಿಯೂ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿದ್ದು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು.

ಭಾನುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 10 ಮನೆಗಳು ಭಾಗಶಃ ಹಾನಿಯಾಗಿದ್ದು, 2 ದೊಡ್ಡ ಜಾನುವಾರು, 3 ಸಣ್ಣ ಜಾನುವಾರು ಹಾಗೂ 6.11 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.ಚಳ್ಳಕೆರೆ ತಾಲೂಕಿನಲ್ಲಿ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ 8 ಮನೆ ಭಾಗಶಃ ಹಾನಿಯಾಗಿದ್ದು, 0.50 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹಿರಿಯೂರು ತಾಲೂಕಿನಲ್ಲಿ 2 ದೊಡ್ಡ ಜಾನುವಾರು ಹಾಗೂ 1 ಮನೆ ಭಾಗಶಃ ಹಾನಿ, 1.61 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲೂಕಿನಲ್ಲಿ 2 ಸಣ್ಣ ಜಾನುವಾರು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಡಿ.ಮರಿಕುಂಟೆಯಲ್ಲಿ 51.6 ಮಿ.ಮೀ. ಮಳೆ: ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಚಳ್ಳಕೆರೆ ತಾಕಿನ ಡಿ.ಮರಿಕುಂಟೆಯಲ್ಲಿ 51.6 ಮಿಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣವಾಗಿದೆ. ಚಳ್ಳಕೆರೆಯಲ್ಲಿ 29.6 ಮಿಮೀ, ಪರಶುರಾಂಪುರ 31.8, ನಾಯಕನಹಟ್ಟಿ 8.2, ತಳಕು 27.2 ಮಿಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 13.2, ಚಿಕ್ಕಜಾಜೂರು 12.6, ಹೆಚ್.ಡಿ.ಪುರದಲ್ಲಿ 11.2 ಮಿಮೀ ಮಳೆಯಾಗಿದೆ. ಮೊಳಕಾಲ್ಮುರಿನಲ್ಲಿ 23 ಮಿಮೀ, ರಾಯಾಪುರ 15.6, ಬಿ.ಜಿಕೆರೆ 37, ರಾಂಪುರ 6, ದೇವಸಮುದ್ರದಲ್ಲಿ 2 ಮಿಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 6.4 ಮಿಮೀ, ಬಾಗೂರು 17.2, ಮಾಡದಕೆರೆ 17.2, ಮತ್ತೋಡು 14.2, ಶ್ರೀರಾಂಪುರದಲ್ಲಿ 35 ಮಿಮೀ ಮಳೆಯಾಗಿದೆ. ಚಿತ್ರದುರ್ಗ 21 ಮಿಮೀ, ಭರಮಸಾಗರ 3.4, ಸಿರಿಗೆರೆ 9, ಐನಹಳ್ಳಿಯಲ್ಲಿ 11.2 ಮಿ.ಮೀ ಮಳೆಯಾಗಿದೆ. ಹಿರಿಯೂರಿನಲ್ಲಿ 31.2 ಮಿ.ಮೀ, ಇಕ್ಕನೂರು 15 , ಈಶ್ವರಗೆರೆ 20.2 , ಬಬ್ಬೂರು 11 ಹಾಗೂ ಸೂಗೂರು 31.2 ಮಿ.ಮೀ. ಮಳೆಯಾಗಿದೆ.