ಕನ್ನಡಪ್ರಭ ವಾರ್ತೆ ಕುಶಾಲನಗರ
ಬಸವನಹಳ್ಳಿ ಆಶ್ರಮ ಶಾಲೆ ಕಾಂಪೌಂಡ್ ಗೇಟ್ ಬಿದ್ದು ಸಾವನ್ನಪ್ಪಿದ ಬಾಲಕಿಯ ಮನೆಗೆ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಐಟಿಡಿಪಿ ಇಲಾಖೆಯಿಂದ ತಕ್ಷಣ ಒಂದು ಲಕ್ಷ ವಿಶೇಷ ಪರಿಹಾರ ನೀಡಲಾಗಿದೆ. ಪ್ರಕೃತಿ ವಿಕೋಪ ನಿಧಿಯಿಂದ 5 ಲಕ್ಷ ರು. ಕುಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. ಈ ಸಂಬಂಧ ದೊರಕುವ ಪರಿಹಾರ ಹಣವನ್ನು ಮಕ್ಕಳ ಹೆಸರಿನಲ್ಲಿ ನಿರಖು ಠೇವಣಿ ಇಡುವಂತೆ ಸಲಹೆ ನೀಡಿದರು.
ಗಿರಿಜನ ಹಾಡಿಯ ಸತೀಶ್ ಮತ್ತು ಪವಿತ್ರ ದಂಪತಿ ಪುತ್ರಿ ಅಪೂರ್ವ (4) ಶಾಲೆಯ ಬಳಿ ಆಟವಾಡಲು ತೆರಳಿದ ಸಂದರ್ಭ ಗೇಟ್ ಕಳಚಿ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿತ್ತು.ಇಂದು ಬಾಲಕಿಯ ಅಂತ್ಯ ಸಂಸ್ಕಾರ ನಡೆದಿದ್ದು, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ರು. 10 ಸಾವಿರ ಅಂತ್ಯಕ್ರಿಯೆಗೆ ನೆರವು ಕಲ್ಪಿಸಲಾಯಿತು.
ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸ್ಥಳಿಯ ಗ್ರಾಮ ಪಂಚಾಯಿತಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಪ್ರಮುಖರಾದ ಆರ್ ಕೆ ಚಂದ್ರ, ನಂಗಾರು ಜಗ, ಅಧಿಕಾರಿಗಳಾದ ಭಾಗೀರಥಿ, ಸಿದ್ದೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಮತ್ತು ಸ್ಥಳೀಯ ಪ್ರಮುಖರು ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು.
ಶಾಸಕರು ಹಾಡಿಗಳ ವ್ಯಾಪ್ತಿಯಲ್ಲಿರುವ ಶಿಥಿಲ ಕಟ್ಟಡಗಳನ್ನು, ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಹಾಡಿಗಳಲ್ಲಿ ತಕ್ಷಣ ಅಲ್ಲಿನ ಸಮಗ್ರ ಮಾಹಿತಿ ಪಡೆಯುವುದರೊಂದಿಗೆ ತಮ್ಮ ಉಪಸ್ಥಿತಿಯಲ್ಲಿ ವಿಶೇಷ ಸಭೆಗಳನ್ನು ಏರ್ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.