ಕೆಡಿಪಿ ಸಭೆ ಸಭಾತ್ಯಾಗ ಮಾಡಿದ ಶಾಸಕ

| Published : Feb 25 2025, 12:50 AM IST

ಸಾರಾಂಶ

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಅಭಿವೃದ್ಧಿ ಯೋಜನೆ ಬಿಟ್ಟು ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆದುದನ್ನು ಪ್ರತಿಭಟಿಸಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ ಗೌಡರು ಸಭಾತ್ಯಾಗ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಅಭಿವೃದ್ಧಿ ಯೋಜನೆ ಬಿಟ್ಟು ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆದುದನ್ನು ಪ್ರತಿಭಟಿಸಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ ಗೌಡರು ಸಭಾತ್ಯಾಗ ಮಾಡಿದರು.ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಂಕಿ ಅಂಶವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್‌.ಎಂ. ರೇವಣ್ಣ ಅವರು ಪ್ರಸ್ತಾಪ ಮಾಡಿದಾಗ ಸುರೇಶ್‌ಗೌಡರು, ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ಆಗಲಿ ಎಂದು ಸೂಚಿಸಲು ಯತ್ನಿಸಿದರು. ಹೀಗೆ ಎರಡು ಸಾರಿ ಅವರು ಎದ್ದು ನಿಂತಾಗಲೂ ಅವಕಾಶ ಸಿಗದೇ ಇದ್ದಾಗ ಆಕ್ರೋಶಗೊಂಡ ಅವರು ವಿದ್ಯುತ್‌ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆಯಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಅದನ್ನು ಚರ್ಚಿಸಬೇಕು ಎಂದು ಪಟ್ಟು ಹಿಡಿದರು.ಆದರೆ ವೇದಿಕೆ ಮೇಲೆ ಇದ್ದ ಸಚಿವರು, ಆ ವಿಷಯ ಬಂದಾಗ ಅದನ್ನು ಗಮನಿಸೋಣ ಎಂದು ಮತ್ತೆ ಗ್ಯಾರಂಟಿ ಯೋಜನೆಗಳ ಚರ್ಚೆ ಕೈಗೆತ್ತಿಕೊಂಡರು. ಇದರಿಂದ ಇನ್ನಷ್ಟು ಕುಪಿತರಾದ ಶಾಸಕರು, ಆರು ತಿಂಗಳ ನಂತರ ಸಭೆ ಸೇರಿದ್ದೇವೆ. 35 ಇಲಾಖೆಗಳ ವಿಷಯ ಚರ್ಚೆ ಆಗಬೇಕು. ಅದು ಬಿಟ್ಟು ಗ್ಯಾರಂಟಿ ಯೋಜನೆಗಳ ಚರ್ಚೆ ಏಕೆ ಎಂದು ಕೇಳಿದರು. ಗ್ಯಾರಂಟಿ ಯೋಜನೆಗಳ ಕುರಿತು ಚರ್ಚೆ ಮಾಡಲು ತಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಮೊದಲು ಜನರ ಸಂಕಷ್ಟಗಳ ಕುರಿತು ಚರ್ಚೆಯಾಗಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲಾನುಭವಿಗಳ ಕುರಿತು ಪ್ರತ್ಯೇಕವಾದ ಸಭೆ ಮಾಡಿರಿ. ಈಗ ಬೇಡ. ಈಗ ಕಾರ್ಯ ಕಲಾಪ ಪಟ್ಟಿಯಲ್ಲಿ ಇರುವ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಲೋಪ ದೋಷಗಳನ್ನು ಚರ್ಚೆ ಮಾಡೋಣ ಎಂದು ಅವರು ಒತ್ತಾಯಿಸಿದರು. ಆದರೆ, ಸೂಕ್ತ ಪ್ರತಿಕ್ರಿಯೆ ಸಿಗದೇ ಇದ್ದಾಗ ಅವರು ತಾವು ಈ ನಿರರ್ಥಕ ಸಭೆಯಿಂದ ಹೊರನಡೆಯುವುದಾಗಿ ಹೇಳಿ ಹೊರಟು ಹೋದರು.