ಶಾಲಾ-ಕಾಲೇಜು ನಿರ್ವಹಣೆ ಅನುದಾನ ಬಿಡುಗಡೆಗೆ ಸಿಎಂಗೆ ಶಾಸಕ ಯಶ್ಪಾಲ್ ಪತ್ರ

| Published : Sep 22 2024, 02:04 AM IST / Updated: Sep 22 2024, 02:05 AM IST

ಶಾಲಾ-ಕಾಲೇಜು ನಿರ್ವಹಣೆ ಅನುದಾನ ಬಿಡುಗಡೆಗೆ ಸಿಎಂಗೆ ಶಾಸಕ ಯಶ್ಪಾಲ್ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ನೀಡಲಾಗುವ ನಿರ್ವಹಣಾ ಅನುದಾನ ಬಿಡುಗಡೆಯಾಗದೆ ವಿದ್ಯುತ್ ಬಿಲ್ ಪಾವತಿ ಮಾಡಲಾಗುತ್ತಿಲ್ಲ. ಇದರಿಂದ ಮೆಸ್ಕಾಂ ಅಧಿಕಾರಿಗಳು ಶಾಲಾ-ಕಾಲೇಜುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮರ್ಪಕವಾಗಿ ಗೌರವಧನ ಪಾವತಿಯಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಾಲಾ ಕಾಲೇಜು ನಿರ್ವಹಣೆ ಅನುದಾನ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಸಹಿತ ಹಲವು ಬಾಕಿ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ನೀಡಲಾಗುವ ನಿರ್ವಹಣಾ ಅನುದಾನ ಬಿಡುಗಡೆಯಾಗದೆ ವಿದ್ಯುತ್ ಬಿಲ್ ಪಾವತಿ ಮಾಡಲಾಗುತ್ತಿಲ್ಲ. ಇದರಿಂದ ಮೆಸ್ಕಾಂ ಅಧಿಕಾರಿಗಳು ಶಾಲಾ-ಕಾಲೇಜುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮರ್ಪಕವಾಗಿ ಗೌರವಧನ ಪಾವತಿಯಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ.ಪ್ರಾಕೃತಿಕ ವಿಕೋಪದಿಂದ ಹಾನಿಯ ಬಗ್ಗೆ ಜಿಲ್ಲಾಡಳಿತವು ಪರಿಶೀಲನೆ ನಡೆಸಿ ಅಂದಾಜು 234 ಕೋಟಿ ರು. ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ರಸ್ತೆಗಳ, ಚರಂಡಿಗಳ, ಶಾಲೆ-ಅಂಗನವಾಡಿ ಇತ್ಯಾದಿ ಕಟ್ಟಡ ದುರಸ್ತಿಗೆ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕಾಗಿದೆ.ರಾಜ್ಯ ಸರ್ಕಾರವು ಕಳೆದ 4 ತಿಂಗಳಿನಿಂದ ಹೈನುಗಾರರಿಗೆ ನೀಡಬೇಕಾದ ಲೀಟರ್ ಒಂದಕ್ಕೆ 5 ರು. ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ಹೈನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು, ಸದ್ರಿ ಮೊತ್ತವನ್ನು ಏಕಕಂತಿನಲ್ಲಿ ಬಿಡುಗಡೆ ಮಾಡಬೇಕು ಮತ್ತು ಸರ್ಕಾರದ ವಿವಿಧ ನಿಗಮ ಮಂಡಳಿಗಳ ಸಿಬ್ಬಂದಿಗೆ ಕಳೆದ 4-6 ತಿಂಗಳಿಂದ ವೇತನ ಪಾವತಿಯಾಗದೆ ತೊಂದರೆಗೊಳಗಾಗಿದ್ದು, ತಕ್ಷಣ ನಿಗಮ ಮಂಡಳಿಗಳ ಸಿಬ್ಬಂದಿಯ ವೇತನ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.