ಸಾರಾಂಶ
ಬ್ರಹ್ಮಾವರ ಗಾಂಧಿ ಮೈದಾನದ ಅವ್ಯವಸ್ಥೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಗಾಂಧಿ ಮೈದಾನದ ಅವ್ಯವಸ್ಥೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಶಾಸಕರು, ಬ್ರಹ್ಮಾವರ ಭಾಗದ ಕೇಂದ್ರ ಭಾಗದಲ್ಲಿರುವ ಗಾಂಧಿ ಮೈದಾನವನ್ನು ಸಾರ್ವಜನಿಕರ ಹಾಗೂ ಕ್ರೀಡಾಪ್ರೇಮಿಗಳ ಬೇಡಿಕೆಯಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರುವ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಹಂತ ಹಂತವಾಗಿ ಮೈದಾನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.ವಾಕಿಂಗ್ ಟ್ರ್ಯಾಕ್, ವಾಲಿಬಾಲ್ ಮೈದಾನ, ಕಬಡ್ಡಿ ಮೈದಾನ, ಶೌಚಾಲಯ, ಬಯಲು ರಂಗ ಮಂದಿರ, ಕ್ರಿಕೆಟ್ ಮೈದಾನ ಸಹಿತ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.ಈಗಾಗಲೇ ಗಾಂಧಿ ಮೈದಾನದಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ಎಂಜಿನಿಯರ್‌ರಿಂದ ಮಾಹಿತಿ ಪಡೆದ ಶಾಸಕರು ಸ್ಥಳೀಯರ ಅಭಿಪ್ರಾಯದಂತೆ ಮಾಸ್ಟರ್ ಪ್ಲ್ಯಾನ್ ಮಾಡುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ, ಹಂದಾಡಿ ಗ್ರಾಪಂ ಅಧ್ಯಕ್ಷೆ ಶೋಭಾ, ಚಾಂತಾರ್ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಸ್ಥಳೀಯ ಮುಖಂಡ ರಾಜೇಶ್ ಶೆಟ್ಟಿ ಬಿರ್ತಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ನಿಶಾನ್ ರೈ, ಸತ್ಯರಾಜ್, ಎಸ್. ನಾರಾಯಣ, ಅರ್ಜುನ್ ಪ್ರಭು, ಭರತ್ ಶೆಟ್ಟಿ, ದೇವಾನಂದ, ಸಚಿನ್ ಪೂಜಾರಿ, ದಿನೇಶ್, ಸಂತೋಷ್ ಜತ್ತನ್ ಹೇರೂರು, ವಸಂತ ಗಿಳಿಯಾರ್, ಚಂದ್ರ ಶೇಖರ್ ಶೆಟ್ಟಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.