ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಕಟ್ಟಡದಲ್ಲಿ ಭಾನುವಾರ ಸಂಜೆ ಅಗ್ನಿ ಅನಾಹುತದಿಂದ ಹಾನಿಗೀಡಾದ ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು.

ಹಾನಿ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಹಾಗೂ ನಗರಸಭೆಯ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟನೆ ಬಗ್ಗೆ ಸ್ಥಳೀಯ ವರ್ತಕರಿಂದ ಮಾಹಿತಿ ಪಡೆದರು. ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು. ದುರಂತದಲ್ಲಿ ನಷ್ಟಕ್ಕೊಳಗಾದವರಿಗೆ ರಾಜ್ಯ ಸರ್ಕಾರ ತಕ್ಷಣ ವಿಶೇಷ ಪ್ರಕರಣದಡಿ 10 ಕೋಟಿ ರು. ಪರಿಹಾರ ನೀಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.

ಅಗ್ನಿಶಾಮಕ ದಳ ತಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಉಡುಪಿ ಅಗ್ನಿಶಾಮಕ ದಳಕ್ಕೆ ಆಧುನಿಕ ತಂತ್ರಜ್ಞಾನ, ಹೆಚ್ಚುವರಿ ವಾಹನ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದ್ದು, ಈಗಾಗಲೇ ಪ್ರಗತಿಯಲ್ಲಿರುವ ಮಣಿಪಾಲ ಅಗ್ನಿಶಾಮಕ ದಳದ ಕಾಮಗಾರಿ ಪೂರ್ಣಗೊಳಿಸಿ ಸೇವೆಗೆ ಒದಗಿಸಲು ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು. ಈ ಸಂದರ್ಭ ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.