2025ರ ಡಿಸೆಂಬರ್‌ನಲ್ಲಿ 95 ರೈತರಿಂದ 990.50 ಕ್ವಿಂಟಲ್ ಹೆಸರನ್ನು ಬ್ಯಾಹಟ್ಟಿಯ ಕೃಷಿ ಪತ್ತಿನ ಸಹಕಾರ ಸಂಘ (ಬೆಂಬಲ ಬೆಲೆ ಖರೀದಿ ಕೇಂದ್ರ)ದಲ್ಲಿ ಖರೀದಿಸಲಾಗಿತ್ತು. ಇದರ ₹ 87 ಲಕ್ಷ ರೈತರಿಗೆ ಪಾವತಿಸಬೇಕಿತ್ತು.
ಹುಬ್ಬಳ್ಳಿ:
ಖರೀದಿಸಿ ತಿರಸ್ಕರಿಸಿದ ಹೆಸರಿನ ದುಡ್ಡಿಗಾಗಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಮಂಗಳವಾರ ಶಾಸಕ ಎನ್.ಎಚ್. ಕೋನರಡ್ಡಿ ನೀಡಿದ ಭರವಸೆ ಮೇರೆಗೆ ಹಿಂಪಡೆಯಲಾಗಿದೆ.ಇಲ್ಲಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಚೇರಿ ಎದುರು ಕಳೆದ 29 ದಿನಗಳಿಂದ ಬ್ಯಾಹಟ್ಟಿ, ಕುಸುಗಲ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ರೈತಸೇನಾ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಆಗಿದ್ದೇನು?:2025ರ ಡಿಸೆಂಬರ್‌ನಲ್ಲಿ 95 ರೈತರಿಂದ 990.50 ಕ್ವಿಂಟಲ್ ಹೆಸರನ್ನು ಬ್ಯಾಹಟ್ಟಿಯ ಕೃಷಿ ಪತ್ತಿನ ಸಹಕಾರ ಸಂಘ (ಬೆಂಬಲ ಬೆಲೆ ಖರೀದಿ ಕೇಂದ್ರ)ದಲ್ಲಿ ಖರೀದಿಸಲಾಗಿತ್ತು. ಇದರ ₹ 87 ಲಕ್ಷ ರೈತರಿಗೆ ಪಾವತಿಸಬೇಕಿತ್ತು. ಆದರೆ, ಎಲ್ಲವೂ ಸರಿಯಿದೆ ಎಂದು ರೈತರಿಂದ ಖರೀದಿಸಿ ಬರೋಬ್ಬರಿ 1 ತಿಂಗಳ ಬಳಿಕ ಹೆಸರು ಗುಣಮಟ್ಟದಲ್ಲಿಲ್ಲ. ಹೀಗಾಗಿ ವಾಪಸ್ ತೆಗೆದುಕೊಂಡು ಹೋಗಿ ಎಂದು ರೈತರಿಗೆ ನೋಟಿಸ್ ನೀಡಿ ತಿರಸ್ಕರಿಸಿತ್ತು. ಇದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕನ್ನಡಪ್ರಭ ಸರಣಿ ಲೇಖನ ಪ್ರಕಟಿಸಿತ್ತು. ಆಗ ಜಿಲ್ಲಾಡಳಿತ ಎಚ್ಚೆದ್ದು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ ತನಿಖೆ ನಡೆಸಿತ್ತು. ತನಿಖಾ ವರದಿಯಲ್ಲಿ ಸೊಸೈಟಿಯದ್ದೇ ತಪ್ಪು. ಹೀಗಾಗಿ ರೈತರಿಗೆ ಹಣ ನೀಡಬೇಕು ಎಂದು ತಿಳಿಸಲಾಗಿತ್ತು. ಆದರೂ ಜಿಲ್ಲಾಡಳಿತ, ಸೊಸೈಟಿಯಾಗಲಿ ಹಣ ನೀಡಿರಲಿಲ್ಲ. ಹೀಗಾಗಿ ರೈತರು 29 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿದ್ದರು.ಶಾಸಕ ಎನ್.ಎಚ್. ಕೋನರಡ್ಡಿ ಆಗಮಿಸಿ, ಈಗಾಗಲೇ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಸಂಪುಟ ಸಭೆಯಲ್ಲಿ ಈ ವಿಷಯವನ್ನಿಟ್ಟು ರೈತರಿಗೆ ದುಡ್ಡು ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು ಅಲ್ಲದೇ, ಧರಣಿ ನಿರತರಿಗೆ ಎಳನೀರು ಕುಡಿಸುವ ಮೂಲಕ ಧರಣಿ ಹಿಂಪಡೆಯುವಂತೆ ಮನವೋಲಿಸಿದರು.
ಶಾಸಕರ ಭರವಸೆ ಮೇರೆಗೆ ಧರಣಿ ಹಿಂಪಡೆದರು. ಧರಣಿಯಲ್ಲಿ ರೈತಸೇನೆ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ, ಮುಖಂಡರಾದ ಗುರು ರಾಯನಗೌಡರ, ವೀರುಪಾಕ್ಷಪ್ಪ ಪಾಯಣ್ಣವರ, ಮಲ್ಲಣ್ಣ ಸೇರಿದಂತೆ ಹಲವರಿದ್ದರು.