ಅಧಿವೇಶನದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು: ಯು.ಟಿ.ಖಾದರ್

| Published : Jan 30 2025, 12:30 AM IST

ಅಧಿವೇಶನದಲ್ಲಿ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು: ಯು.ಟಿ.ಖಾದರ್
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಮಂಡಲದ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆ ನಡೆಯುವ ಅಗತ್ಯವಿದ್ದು, ವಿಷಯಾಧಾರಿತ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗಲೂ ಸರಿಯಾಗಿ ಭಾಗವಹಿಸುತ್ತಿರಲಿಲ್ಲ. ಶಾಸಕರ ಕಡ್ಡಾಯ ಹಾಜರಿ ಮಾಡಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಜನಪ್ರತಿನಿಧಿಗಳು ಜವಾಬ್ದಾರಿ ಅರಿತು ಅಧಿವೇಶನಗಳಲ್ಲಿ ಪಾಲ್ಗೊಳ್ಳಬೇಕು. ಅಗತ್ಯವಿರುವ ಮತ್ತು ಗುಣಮಟ್ಟದ ವಿಚಾರಗಳು ಚರ್ಚೆಯಾಗುವಾಗ ಕಡ್ಡಾಯ ಹಾಜರಿ ಇರಬೇಕು ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನ ಮಂಡಲದ ಅಧಿವೇಶನದಲ್ಲಿ ಗುಣಮಟ್ಟದ ಚರ್ಚೆ ನಡೆಯುವ ಅಗತ್ಯವಿದ್ದು, ವಿಷಯಾಧಾರಿತ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಅಧಿವೇಶನ ನಡೆದಾಗಲೂ ಸರಿಯಾಗಿ ಭಾಗವಹಿಸುತ್ತಿರಲಿಲ್ಲ. ಶಾಸಕರ ಕಡ್ಡಾಯ ಹಾಜರಿ ಮಾಡಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಅವರ ಜವಾಬ್ದಾರಿ ಅರಿತುಕೊಂಡು ಭಾಗಿಯಾಗಬೇಕು ಎಂದರು.

ವಿಧಾನ ಸಭೆಯಲ್ಲಿ ವೈಯಕ್ತಿಕ ಮಟ್ಟದ ಚರ್ಚೆಗೆ ಹೆಚ್ಚಿನ ಆದ್ಯತೆ ಕೊಡಬಾರದು. ಇದರಲ್ಲಿ ಮಾಧ್ಯಮಗಳ ಪಾತ್ರವೂ ಮುಖ್ಯ. ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದವರು ಶಾಸನ ಸಭೆಗೆ ಆರಿಸಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಉದ್ಯಮಿಗಳು ಶಾಸನಸಭೆ ಪ್ರವೇಶಿಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಏನಾಗಲಿದೆಯೋ ಗೊತ್ತಿಲ್ಲ. ಇತ್ತೀಚೆಗೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವವರಿಗೆ ಟಿಕೆಟ್ ಕೊಡುತ್ತಾರೆಯೇ ಹೊರತು ಜನರೊಂದಿಗೆ ಒಡನಾಟವಿದ್ದು, ಒಳ್ಳೆಯ ಹಿನ್ನೆಲೆ ಇದ್ದರೂ ಟಿಕೆಟ್ ಸಿಗುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎನ್ನಲಾದ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ವಿಧಾನಪರಿಷತ್ ಸಭಾಪತಿ ಅವರ ನಿಲುವಿಗೆ ನಾನು ಬದ್ಧ. ವಿಧಾನ ಪರಿಷತ್ನಲ್ಲಿ ನಡೆದಿರುವ ಘಟನೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನನಗೆ ಮಂತ್ರಿಯಾಗುವ ಅವಕಾಶವಿತ್ತು. ಈ ನಡುವೆ ಸ್ಪೀಕರ್ ಹುದ್ದೆ ದೊರತದ್ದು ಸಂತೋಷವನ್ನುಂಟು ಮಾಡಿದೆ. ಸ್ಪೀಕರ್ ಆದ ನಂತರ ಎಲ್ಲರನ್ನೂ ಪಕ್ಷಾತೀತವಾಗಿ ನೋಡುತ್ತಿದ್ದೇನೆ. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಸಮಾನವಾಗಿ ಕಾಣುತ್ತಿದ್ದೇನೆ. ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಆಡಳಿತ ಪತ್ರಿಪಕ್ಷಗಳ ಜಟಾಪಟಿ ಬಳಿಕ ಸ್ಪೀಕರ್ ವಿರುದ್ದವೂ ದೂರುತ್ತಾರೆ. ಇದು ಪ್ರಜಾಪ್ರಭುತ್ವದ ಸೊಬಗು. ಬಹುತೇಕ ಶಾಸಕರು ಅಧಿವೇಶನದಲ್ಲಿ ಸಮರ್ಪಕವಾಗಿ ಪಾಲ್ಗೊಳ್ಳುವುದಿಲ್ಲ. ಪ್ರಮುಖ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವಾಗಲೂ ಅಸೆಂಬ್ಲಿ ಖಾಲಿ ಆಗಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವಿಧಾನ ಮಂಡಲ ಅಧಿವೇಶನಕ್ಕೆ ಕೋಟ್ಯಾಂತರ ರೂ ಖರ್ಚಾಗುತ್ತದೆ. ಹಾಗಾಗಿ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಜವಾಬ್ದಾರಿ ಅರಿತು ಭಾಗಿಯಾಗಬೇಕು ಎಂದು ಅವರು ತಿಳಿಸಿದರು.

ಬಳಿಕ ವಿವಿಧ ಪಶಸ್ತಿ ಪುರಸ್ಕೃತರಾದ ದಯಾಶಂಕರ ಮೈಲಿ, ಗುರುಪ್ರಸಾದ್ ತುಂಬಸೋಗೆ, ಪಿ. ಶಿಲ್ಪಾ, ಕೆ.ಪಿ. ನಾಗರಾಜ್, ನಜೀರ್ ಅಹಮದ್, ಶಿವಕುಮಾರ ವಿ. ರಾವ್, ಸಿ.ಜೆ. ಪುನೀತ್ ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಉಪಾಧ್ಯಕ್ಷ ರವಿ ಪಾಂಡವಪುರ, ನಗರ ಕಾರ್ಯದರ್ಶಿ ಕೃಷ್ಣೋಜಿರಾವ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.