ತಾಲೂಕಿಗೆ ಒಂದರಂತೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್ ಖರೀದಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಡಿ.8ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟ ಹಮ್ಮಿಕೊಂಡಿರುವ ರೈತರೊಂದಿಗೆ ಜಿಲ್ಲೆಯ ಶಾಸಕರು ಶುಕ್ರವಾರ ಸಂಜೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಆದ್ದರಿಂದ ಹೆದ್ದಾರಿ ಬಂದ್ ಖಚಿತ ಎಂದು ರೈತರು ಘೋಷಿಸಿದ್ದಾರೆ.
ಹಾವೇರಿ: ತಾಲೂಕಿಗೆ ಒಂದರಂತೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಲ್ ಖರೀದಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಡಿ.8ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟ ಹಮ್ಮಿಕೊಂಡಿರುವ ರೈತರೊಂದಿಗೆ ಜಿಲ್ಲೆಯ ಶಾಸಕರು ಶುಕ್ರವಾರ ಸಂಜೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಆದ್ದರಿಂದ ಹೆದ್ದಾರಿ ಬಂದ್ ಖಚಿತ ಎಂದು ರೈತರು ಘೋಷಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿಧಾನಸಭೆ ಉಪಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಹೋರಾಟ ಹಿಂಪಡೆಯುವಂತೆ ಮನವಿ ಮಾಡಲಾಯಿತು. ಜಿಲ್ಲಾಧಿಕಾರಿ ವಿಜಯಮಹಂತೇಶ ದಾನಮ್ಮನವರ, ಎಸ್ಪಿ ಯಶೋದಾ ವಂಟಗೋಡಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಡಿ.8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವ ದಿನವೇ ರೈತರು ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಬಳಿ ಅಹೋರಾತ್ರಿ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳು ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಈಗಾಗಲೇ ಸರ್ಕಾರ ಮೆಕ್ಕೆಜೋಳವನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಆದೇಶಿಸಿದೆ. ಸರ್ಕಾರ ನಿಮ್ಮ ಪರವಾಗಿದೆ. ಆದ್ದರಿಂದ ಹೋರಾಟ ಕೈಬಿಡಿ ಎಂದು ಶಾಸಕರು ರೈತರಲ್ಲಿ ಮನವಿ ಮಾಡಿದರು. ಆದರೆ, ತಮ್ಮ ಬೇಡಿಕೆ ಈಡೇರದ ಹೊರತು ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಪ್ರತಿ ತಾಲೂಕಿಗೆ ಒಂದರಂತೆ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟರ್ ಮೆಕ್ಕೆಜೋಳ ಖರೀದಿಸಬೇಕು.ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು ಎಂದು ರೈತ ಮುಖಂಡರು ಶಾಸಕರನ್ನು ಒತ್ತಾಯಿಸಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಿಎಂ ಜೊತೆ ಚರ್ಚಿಸಿ ರೈತರ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರ ನೀಡಲಾಗುವುದೆಂದು ಶಾಸಕರು ಭರವಸೆ ನೀಡಿದರು.
ಇದಕ್ಕೆ ರೈತ ಮುಖಂಡರು ಒಪ್ಪದೇ ಡಿ.8ರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ ತಿಳಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮರಿಗೌಡ ಪಾಟಿಲ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಎಚ್.ಎಚ್. ಮುಲ್ಲಾ, ರಾಜು ತರ್ಲಗಟ್ಟ, ಸುರೇಶ ಮೈದೂರ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ, ರುದ್ರಪ್ಪ ಅಣ್ಣಿ, ಜಾನ್ ಪುನಿತ್, ಅಬ್ದುಲ್ ಖಾದರ್ ಮೊದಲಾದವರು ಇದ್ದರು.