ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದು ಧಾರ್ಮಿಕ ಹಬ್ಬ ಹರಿದಿನಗಳ ಆಚರಣೆಯನ್ನು ರಾತ್ರಿ 11.30ರೊಳಗೆ ಮುಕ್ತಾಯಗೊಳಿಸುವಂತೆ ಪೊಲೀಸ್ ಇಲಾಖೆ ಮಾರ್ಗದರ್ಶಿ ಸುತ್ತೋಲೆ ಹೊರಡಿಸಿರುವುದಕ್ಕೆ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಶಾಸಕರ ವಿರೋಧ ವ್ಯಕ್ತವಾಗಿದೆ.ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಮಂಗಳವಾರ ಮಂಗಳೂರು ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.
ಎಸ್‌ಒಪಿ(ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ವಯ ಹಿಂದು ಹಬ್ಬ ಹರಿದಿನಗಳನ್ನು ನಿಗದಿತ ಅವಧಿಯೊಳಗೆ ಆಚರಿಸುವಂತೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ರಾತ್ರಿ 11.30ರೊಳಗೆ ಉತ್ಸವಗಳನ್ನು ಮುಕ್ತಾಯಗೊಳಿಸುವುದು ಅಸಾಧ್ಯದ ಮಾತು. ಕರಾವಳಿಯಲ್ಲಿ ಹಲವು ವರ್ಷಗಳಿಂದ ಪಾರಂಪರಿಕವಾಗಿ ಚೌತಿ, ನವರಾತ್ರಿ, ದೀಪಾವಳಿ ಉತ್ಸವಗಳು ನಡೆದುಕೊಂಡು ಬರುತ್ತಿವೆ. ಇಂತಹ ಉತ್ಸವಗಳು ರಾತ್ರಿಯೇ ನಡೆಯುವುದರಿಂದ ಸಮಯದ ಪರಿಮಿತಿ ನಿಗದಿಗೊಳಿಸುವಂತಿಲ್ಲ. ಮಾತ್ರವಲ್ಲ ಈ ಉತ್ಸವಗಳಲ್ಲಿ ಇಲ್ಲಿವರೆಗೆ ಯಾವುದೇ ಸಮಸ್ಯೆ ಬಂದಿಲ್ಲ. ಹೀಗಿರುವಾಗ ವಿನಾ ಕಾರಣ ಹಿಂದು ಉತ್ಸವಗಳಿಗೆ ಸಮಯದ ಮಿತಿ ಹೇರುವ ಮೂಲಕ ಅಶಾಂತಿಗೆ ದಾರಿ ಮಾಡಿಕೊಡುವುದು ಸರಿಯಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ದನಿಗೂಡಿಸಿದರು.ಜಿಲ್ಲಾಧಿಕಾರಿ ದರ್ಶನ್, ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ಹಿಂದು ಹಬ್ಬಗಳಿಗೆ ಸರ್ಕಾರಿ ಮಾತ್ರವಲ್ಲ ಖಾಸಗಿ ಶಾಲೆಗಳಲ್ಲೂ ಆಚರಿಸಲು ಶಿಕ್ಷಣ ಇಲಾಖೆ ಅವಕಾಶ ನಿರಾಕರಿಸುತ್ತಿದೆ. ಇದು ಸಂಪ್ರದಾಯಕ್ಕೆ ವಿರೋಧವಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಮತ್ತು ಭಾಗೀರಥಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್, ಖಾಸಗಿ ಶಾಲೆಗಳಲ್ಲಿ ಅವಕಾಶ ನಿರಾಕರಣೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.ಬೆಳೆ ವಿಮೆ ಸಮಸ್ಯೆ: ಹವಾಮಾನ ಆಧಾರಿತ ಹಾಗೂ ಫಸಲು ಬಿಮಾ ವಿಮೆ ಸೇರಿದಂತೆ ವಿಮಾ ಯೋಜನೆಗಳು ಬೆಳೆಗಾರರಿಗೆ ಸಮರ್ಪಕವಾಗಿ ತಲುಪುವಂತೆ ಆಗಬೇಕು. ಈ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದರು.
ಜಾಗ ಮಾರಾಟ ಹಾಗೂ ಕುಟುಂಬದೊಳಗೆ ಜಾಗ ವಿಭಜನೆಗೊಂಡಾಗ ಪಹಣಿ ಪತ್ರದಲ್ಲಿ ಇರುವ ಕಲಂನಲ್ಲಿ ಬೆಳೆ ಎಂದು ನಮೂದು ಆಗಿರುವುದಿಲ್ಲ. ಇದರಿಂದಾಗಿ ಆರ್‌ಟಿಸಿಯಲ್ಲಿ ನಮೂದಿಸಿ ವಿಮೆ ಮಾಡಿಸಿಕೊಳ್ಳಲು ಬೆಳೆಗಾರರು ಪರದಾಟ ನಡೆಸುವಂತಾಗಿದೆ ಎಂದು ಸುಳ್ಯ ಶಾಸಕಿ ಭಗೀರಥಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕಾ ಇಲಾಖೆ ಅಧಿಕಾರಿ, ಇಲಾಖೆಯ ಫ್ರುಟ್ ತಂತ್ರಾಂಶದಲ್ಲಿ ಬೆಳೆಯ ವಿವರ ನಮೂದಿಸಿದ ಬಳಿಕ ಹೊಸ ನೋಂದಣಿ ಆಗಬೇಕು. ಇದಕ್ಕೆ ಜು. 13ರ ವರೆಗೆ ಅವಕಾಶ ಇದೆ. ತೊಂದರೆಗಳು ಇರುವಲ್ಲಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.ಒತ್ತುವರಿ ತೆರವಿಗೆ ಸೂಚನೆ:
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧಿಕೃತವಾಗಿ ಅಂಗಡಿ ಮುಂಗಟ್ಟು ಸ್ಥಾಪಿಸಿ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೊಸ ರೈಲ್ವೆ ಲೇನ್:
ಹಾಸನ-ಮಂಗಳೂರು ನಡುವೆ ಹೊಸದಾಗಿ ರೈಲ್ವೆ ಮಾರ್ಗ ರಚನೆಗೆ ಸರ್ವೆ ಕಾರ್ಯ ನಡೆಸಲಾಗುವುದು. ಸುಬ್ರಹ್ಮಣ್ಯ ಮಾದರಿ ರೈಲು ನಿಲ್ದಾಣ ಕಾಮಗಾರಿ ಶೇ. 70ರಷ್ಟು ಮುಕ್ತಾಯವಾಗಿದೆ. ಬಂಟ್ವಾಳ ರೈಲು ನಿಲ್ದಾಣ ಕಾಮಗಾರಿ ಜುಲೈಗೆ ಪೂರ್ಣಗೊಳ್ಳಲಿದೆ ಎಂದು ಮೈಸೂರು ವಿಭಾಗೀಯ ಅಧಿಕಾರಿ ತಿಳಿಸಿದರು. ಕಬಕ-ಪುತ್ತೂರು ನಿಲ್ದಾಣದಲ್ಲಿ ಶೆಲ್ಟರ್ ರಚನೆಗೆ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚನೆ ನೀಡಿದರು. ಫಾಲ್ಘಾಟ್, ನೈಋತ್ಯ ಹಾಗೂ ಕೊಂಕಣ ರೈಲ್ವೆ ಅಧಿಕಾರಿಗಳನ್ನು ಒಳಗೊಂಡಂತೆ ರೈಲ್ವೆ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಲು ರೈಲ್ವೆ ಸಚಿವ ಸೋಮಣ್ಣ ಸೂಚನೆ ನೀಡಿದ್ದರು. ಈ ಬಗ್ಗೆ ಮೂರು ವಿಭಾಗಗಳ ಅಧಿಕಾರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿಪಡಿಸುವಂತೆ ಸಂಸದರು ಜಿ.ಪಂ. ಸಿಇಒಗೆ ಸೂಚನೆ ನೀಡಿದರು.ಇ ಬಸ್‌ಗೆ ಮಂಗಳೂರಲ್ಲಿ ಜಾಗ:
ಕೇಂದ್ರ ಸರ್ಕಾರ ಮಂಜೂರುಗೊಳಿಸಿದ 100 ಎಲೆಕ್ಟ್ರಿಕಲ್ ಬಸ್‌ಗಳಿಗೆ ಮಂಗಳೂರು ನಗರ ಸರಹದ್ದಿನಲ್ಲೇ ಡಿಪೋಗೆ ಜಾಗ ನಿಗದಿಪಡಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದರು.ಲಭ್ಯ ಮಾಹಿತಿಯಂತೆ ಮುಡಿಪಿನಲ್ಲಿ ಇ ಬಸ್‌ಗಳಿಗೆ ಜಾಗ ಗುರುತಿಸಿದರೆ, ಅದು ಬಹಳ ದೂರ ಹಾಗೂ ಅನವಶ್ಯಕ ವೆಚ್ಚದಾಯಕ. ಹಾಗಾಗಿ ನಗರ ವ್ಯಾಪ್ತಿಯ ಕುಂಟಿಕಾನ ಅಥವಾ ಪಂಪ್‌ವೆಲ್ ಮತ್ತಿತರ ಕಡೆಗಳಲ್ಲಿ ಜಾಗ ನಿಗದಿಪಡಿಸಬೇಕು ಎಂದು ಅವರು ಹೇಳಿದರು.
------------9 ಬಾರಿ ಆಹ್ವಾನಿಸಿದರೂ ಟೆಂಡರ್ ಹಾಕುವವರಿಲ್ಲ!ಮಂಗಳೂರಿನ ಅಳಿವೆ ಬಾಗಿಲು ಬಳಿ ಡ್ರೆಜ್ಜಿಂಗ್ ನಡೆಸಲು ನಿರಂತರ ಒಂಭತ್ತು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಇನ್ನು 10ನೇ ಬಾರಿ ಟೆಂಡರ್ ಕರೆಯಲಾಗುತ್ತಿದೆ ಎಂದು ಬಂದರು ಅಧಿಕಾರಿ ಮಾಹಿತಿ ನೀಡಿದರು. ಆಗ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಡ್ರೆಜ್ಜಿಂಗ್ ಮಾಡದೆ ಹಡಗು ಸಂಚಾರ ಸುಲಭವಲ್ಲ. ನೀರಿನ ಆಳದಲ್ಲಿ 7 ಮೀಟರ್ ಡ್ರೆಜ್ಜಿಂಗ್‌ಗೆ ಹಿಂದಿನ ಸರ್ಕಾರದ ಅವಧಿಯಲ್ಲಿ 29 ಕೋಟಿ ರು. ಬಿಡುಗಡೆಗೊಂಡಿತ್ತು. ಇಲ್ಲಿನ ಕಂಪನಿಗಳು ಈ ಮೊತ್ತಕ್ಕೆ ಟೆಂಡರ್ ಹಾಕುತ್ತಿಲ್ಲ. ಮುಂಬೈ ಮತ್ತಿತರ ಕಡೆಗಳ ಕಂಪನಿಗಳು ಇಷ್ಟು ಸಣ್ಣ ಮೊತ್ತಕ್ಕೆ ಬರುವುದಿಲ್ಲ. ಡ್ರೆಜ್ಜಿಂಗ್ ನಡೆಸದೆ ಜೆಟ್ಟಿ ನಿರ್ಮಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.