ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮುದ್ದೇಬಿಹಾಳ ತಾಲೂಕಿನಲ್ಲಿ ರೈತರ ಕಷ್ಟಗಳನ್ನು ಕೇಳಲಿಕ್ಕೆ ಸ್ಥಳೀಯ ಶಾಸಕರು ಹೋಗದಿರುವುದು ದುರದೃಷ್ಟಕರ. ಸತತ ಮಳೆಗೆ ತೊಗರಿ, ಹತ್ತಿ ಸೇರಿದಂತೆ ಎಲ್ಲ ಬೆಳೆಗಳು ನಾಶವಾಗಿವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.ತಾಲೂಕಿನ ಮೂಕೀಹಾಳ, ಬಾವೂರ, ಕೊಣ್ಣೂರ ಮತ್ತು ತಮ್ಮದಡ್ಡಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ನಂತರ ತಮದಡ್ಡಿ ಗ್ರಾಮದಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಮತಕ್ಷೇತ್ರದ ಯಾವುದೋ ಒಂದು ಹೊಲದಲ್ಲಿ ನಿಂತು ಹೋಗುವುದನ್ನು ಬಿಡಬೇಕು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಡೋಣಿ ನದಿಗೆ ಹೊಂದಿಕೊಂಡಿರುವ ಎಲ್ಲ ರೈತರಿಗೆ ಪ್ರವಾಹದ ಸಮಯದಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸಿದ್ದೇನೆ. ಹಾಗೇ ಎಲ್ಲ ರೈತರಿಗೆ ಪರಿಹಾರ ಕೊಡಿಸುವ ಕೆಲಸವನ್ನು ಈಗಿನ ಶಾಸಕರು ಮಾಡಲಿ ಎಂದರು.
ನಾನು ರೈತರ ವಿಷಯದಲ್ಲಿ ರಾಜಕಾರಣ ಮಾಡಲು ಎಂದೂ ಹೋಗುವುದಿಲ್ಲ. ಸತತ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದೂ ಕಣ್ಣಿಗೆ ಕಾಣುತ್ತಿದ್ದರೂ ಕೂಡ ಶಾಸಕ ನಾಡಗೌಡರು ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಯುತ್ತಿದೆ ವರದಿ ಬಂದ ಬಳಿಕ ಸರ್ಕಾರದ ನಿಯಮದ ಪ್ರಕಾರ ಪರಿಹಾರ ಸಿಗುತ್ತದೆ ಎಂದು ನೆಪ ಹೇಳುತ್ತಾ ಸಾಗುತ್ತಿದ್ದಾರೆ ಎಂದು ಆರೋಪಿಸಿದರು.ಅಧಿಕಾರಿಗಳ ಸಮೀಕ್ಷೆ ನೋಡಿದರೆ ಪಂಚಾಯಿತಿ ವ್ಯಾಪ್ತಿಯ ಆಯ್ದ ಒಂದೆರೆಡು ರೈತರ ಜಮೀನುಗಳಲ್ಲಿ ಭೇಟಿ ನೀಡಿ ೧ ಗುಂಟೆ ೨ ಗುಂಟೆ ಬೆಳೆ ನಾಶವಾಗಿದೆ ಎಂದು ಜಿಪಿಎಸ್ ಮಾಡಿ ಲಿಸ್ಟ್ ತಯಾರಿಸಿ ಆಯಾ ಗ್ರಾಪಂ ಕಚೇರಿ ಮುಂದೆ ಹಚ್ಚುತ್ತಾ ಸಾಗಿದ್ದಾರೆ. ಏಕೆಂದರೆ ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಲು ಕಂದಾಯ ಹಾಗೂ ಕೃಷಿ ಅಧಿಕಾರಿಗಳಿಗೆ ಆಗುತ್ತಿಲ್ಲ. ಹಸಿ ಬರವಿರುವ ಕಾರಣ ಜಮೀನಿನಲ್ಲಿ ಕಾಲಿಟ್ಟರೆ ಕಾಲುಗಳೇ ಸಿಲುಕಿಕೊಳ್ಳುತ್ತಿವೆ. ಹೀಗಿರುವಾಗ ಜಂಟಿ ಸಮಿಕ್ಷೆ ಮಾಡಲು ಹೇಗೆ ಸಾಧ್ಯ? ತೊಗರಿ, ಹತ್ತಿ ಬೆಳೆಗಳು ನೀರಿನಲ್ಲಿ ಕೆಂಪರೋಗದಿಂದ ಒಣಗುತ್ತಿದ್ದು, ಹೂವು, ಕಾಯಿ ಬಿಡುತ್ತಿಲ್ಲ. ಹತ್ತಿಗಿಡಗಳು ತಾಮ್ರರೋಗಕ್ಕೆ ತುತ್ತಾಗಿ ಒಣಗುತ್ತಾ ಸಾಗಿದ್ದರೂ ಶಾಸಕರೂ ಮಾತ್ರ ಇನ್ನೂ ದೀಪಾವಳಿ ವರೆಗೂ ಮಳೆಯಿದೆ ಸಮೀಕ್ಷೆ ನಡೆಯುತ್ತಿದೆ, ಅಲ್ಲಿಯವರೆಗೂ ನೋಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಕೆಳಗಡೆ ಇರುವ ಹಸಿಬರ ಅವರಿಗೆ ಕಾಣಲು ಹೇಗೆ ಸಾಧ್ಯ ಅವರು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯವರೇ ಇದ್ದಾರೆ. ರೈತರ ಸಂಕಷ್ಟದ ಬಗ್ಗೆ ಅರಿತು ಸಂಪೂರ್ಣ ಬೆಳೆ ನಾಶವಾಗಿದ್ದರ ಬಗ್ಗೆ ಘೋಷಿಸಬೇಕು. ರೈತರು ಈಗಾಗಲೇ ಕೆಲವೆಡೆ ತೊಗರಿ ಬೆಳೆ ಹರಗಿ ಸ್ವಚ್ಛಗೊಳಿಸುತ್ತಿದ್ದಾರೆ ಎಂದರು.ಈ ವೇಳೆ ಮುಖಂಡರಾದ ಸೋಮನಗೌಡ ಕವಡಿಮಟ್ಟಿ, ಬಿಜೆಪಿ ರೈತ ಮೋರ್ಚಾ ಮಂಡಲ ಅಧ್ಯಕ್ಷ ಸಂಗಣ್ಣ ಹತ್ತಿ, ಗಿರಿಶ ಪಾಟೀಲ ಸೇರಿದಂತೆ ರೈತರು ಇದ್ದರು.
ಈಗಾಗಲೇ ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನು ವೀಕ್ಷಣೆ ಮಾಡಿದ್ದೇನೆ. ಹಸಿಬರಕ್ಕೆ ತುತ್ತಾದ ತೊಗರಿ, ಹತ್ತಿ, ಈರುಳ್ಳಿ ಸೇರಿದಂತೆ ಎಲ್ಲ ತೋಟಗಾರಿಕಾ ಬೆಳೆಗಳು ಸಹ ಒಣಗುತ್ತಿವೆ. ಈ ರೈತರ ವಿಷಯದಲ್ಲಿ ಶಾಸಕ ನಾಡಗೌಡರು ರಾಜಕಾರಣ ಮಾಡದೇ ಸಂಪೂರ್ಣ ಬೆಳೆ ನಾಶವಾಗಿದ್ದರ ಬಗ್ಗೆ ವರದಿ ಕಳಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎ.ಎಸ್.ಪಾಟೀಲ ನಡಹಳ್ಳಿ ಸಲಹೆ ಮಾಡಿದರು.ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದೇವೆ ಈಗ ಬೆಳೆಯೂ ಇಲ್ಲ, ಪರಿಹಾರವು ಇಲ್ಲದಂತಾಗಿದೆ. ಬೆಳೆ ನಾಶವೆಂದು ಘೋಷಣೆ ಮಾಡಿದರೆ ಕನಿಷ್ಠ ಇನ್ಶೂರೆನ್ಸ್ ಆದರೂ ಬರುತ್ತಿತ್ತು ಅದು ಸಹ ಸಿಗದಂತೆ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ ರೈತ ಬಸನಗೌಡ ತಮದಡ್ಡಿ ತಮ್ಮ ಅಳಲುತೋಡಿಕೊಂಡರು.