ಸಹಕಾರಿ ರಂಗಕ್ಕೂ ಕಾಲಿಟ್ಟ ರೆಸಾರ್ಟ್ ರಾಜಕಾರಣ!

| Published : Oct 15 2025, 02:08 AM IST

ಸಾರಾಂಶ

ಬೆಳಗಾವಿ ಜಿಲ್ಲಾ ಕೇಂದ್ರ ಸಹಾಕರಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ಇದೀಗ ಹಲವು ಹೊಸ ರಾಜಕೀಯ ಸಮೀಕರಣಕ್ಕೆ ಸಾಕ್ಷಿಯಾಗಿದೆ. ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ. ವೈರಿಗಳೂ ಅಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರೂ ಈಗ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಮಿತ್ರರಾಗಿದ್ದಾರೆ. ರೆಸಾರ್ಟ್ ರಾಜಕಾರಣ ಸಹಕಾರಿ ರಂಗಕ್ಕೂ ಕಾಲಿಟ್ಟಿದೆ. ಡಿಸಿಸಿ ಬ್ಯಾಂಕ್‌ ಚುನಾವಣೆ ರಂಗೇರುತ್ತಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಜಿಲ್ಲಾ ಕೇಂದ್ರ ಸಹಾಕರಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ಇದೀಗ ಹಲವು ಹೊಸ ರಾಜಕೀಯ ಸಮೀಕರಣಕ್ಕೆ ಸಾಕ್ಷಿಯಾಗಿದೆ. ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ. ವೈರಿಗಳೂ ಅಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರೂ ಈಗ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಮಿತ್ರರಾಗಿದ್ದಾರೆ. ರೆಸಾರ್ಟ್ ರಾಜಕಾರಣ ಸಹಕಾರಿ ರಂಗಕ್ಕೂ ಕಾಲಿಟ್ಟಿದೆ. ಡಿಸಿಸಿ ಬ್ಯಾಂಕ್‌ ಚುನಾವಣೆ ರಂಗೇರುತ್ತಿದೆ.

ಕಳೆದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಂಸದ ಅಣ್ಣಸಾಹೇಬ ಜೊಲ್ಲೆ ಅವರ ವಿರುದ್ಧ ಜಾರಕಿಹೊಳಿ ಸಹೋದರರು ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಿದ್ದರು. ಜೊಲ್ಲೆ ಸೋಲನುಭವಿಸಿದ್ದರು. ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಅಣ್ಣಾಸಾಹೇಬ ಜೊಲ್ಲೆ ಕೈಜೋಡಿಸಿದ್ದರು. ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜೊಲ್ಲೆ ಮತ್ತು ಬಾಲಚಂದ್ರ ಒಗ್ಗಟ್ಟಾಗಿ ಚುನಾವಣಾ ತಂತ್ರ ರೂಪಿಸಿದ್ದರು. 16 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ಸಿಯೂ ಆಗಿದ್ದಾರೆ.

ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸಿರುವ ಉತ್ತಮ ಪಾಟೀಲ ಅವರು ತಮ್ಮ ಕ್ಷೇತ್ರದ ಪಿಕೆಪಿಎಸ್‌ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಇದರಿಂದಾಗಿ ಸಹಕಾರಿ ರಂಗದಲ್ಲಿಯೂ ರೆಸಾರ್ಟ್ ರಾಜಕೀಯ ಕಾಲಿಟ್ಟಂತಾಗಿದೆ. ಈ ಬೆಳವಣಿಗೆಯಿಂದ ಅಣ್ಣಾಸಾಹೇಬ ಜೊಲ್ಲೆ ಕೂಡ ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜಾರಕಿಹೊಳಿ ಸಹೋದರರು ಯಾವತ್ತಿಗೂ ತಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೊಲ್ಲೆ ದಂಪತಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣವೇ ಬೇರೆ. ಇಲ್ಲಿ ಯಾರೂ ಯಾರನ್ನು ಸೋಲಿಸುತ್ತಾರೋ? ಗೆಲ್ಲಿಸುತ್ತಾರೋ? ಎನ್ನುವುದನ್ನು ಸುಲಭವಾಗಿ ಹೇಳಲಾಗದು.

ಪಿಕೆಪಿಎಸ್ ನಿರ್ದೇಶಕರಿಗೆ ಟೂರ್ ಭಾಗ್ಯ:

ಸಹಕಾರ ಕ್ಷೇತ್ರಕ್ಕೂ ಸಹ ರೆಸಾರ್ಟ್ ರಾಜಕೀಯ ಕಾಲಿಟ್ಟಿದೆ. ಇಷ್ಟು ದಿನಗಳ ಕಾಲ ಶಾಸಕರು ರಾಜಕಾರಣದಲ್ಲಿ ರೆಸಾರ್ಟ್ ರಾಜಕೀಯ ಮಾಡಲಾಗುತ್ತಿದ್ದರು. ಆದರೆ ಬೆಳಗಾವಿ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಸದ್ಯ ಮತದಾನದ ಹಕ್ಕು ಪಡೆದ ಪಿಕೆಪಿಎಸ್ ನಿರ್ದೇಶಕರಿಗೆ ಟೂರ್ ಭಾಗ್ಯ ಒದಗಿ ಬಂದಿದೆ.

ಗೋವಾ, ಮಹಾರಾಷ್ಟ್ರ, ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಪಿಕೆಪಿಎಸ್ ಸದಸ್ಯರು ಟೂರ್ ಹೊರಟಿದ್ದಾರೆ. ಡಿಸಿಸಿ ಬ್ಯಾಂಕ್‌ನ 16 ಸ್ಥಾನಗಳ ಪೈಕಿ 9 ನಿರ್ದೇಶಕರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಇನ್ನೂ 7 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ನಿಪ್ಪಾಣಿ, ಹುಕ್ಕೇರಿ, ಅಥಣಿ, ರಾಯಬಾಗ, ರಾಮದುರ್ಗ, ಕಿತ್ತೂರು, ಬೈಲಹೊಂಗಲದಲ್ಲಿ ಚುನಾವಣೆ ನಡೆಯಲಿದೆ.

ಜಾರಕಿಹೊಳಿ ಹಾಗೂ ಕತ್ತಿ, ಸವದಿ ಬಣಗಳ ಮಧ್ಯೆ ಡಿಸಿಸಿ ಬ್ಯಾಂಕ್ ತೆಕ್ಕೆಗೆ ಪಡೆಯಲು ಜಿದ್ದಾಜಿದ್ದಿಯೂ ನಡೆದಿದೆ. ಅಡ್ಡ ಮತದಾನ, ಮತದಾರರ ಸೆಳೆಯುವ ಭೀತಿಯ ಕಾರಣ ಮತದಾರರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಅ.19ಕ್ಕೆ ನಡೆಯುವ ಚುನಾವಣೆಗೆ ಮತದಾನ ಮಾಡಲು ನೇರವಾಗಿ ಮತದಾರರು ಬರಲಿದ್ದಾರೆ. ಹೈಟೆಕ್ ಟಿಟಿಯಲ್ಲಿ ಬೇರೆ ಬೇರೆ ರಾಜ್ಯಗಳ ರೆಸಾರ್ಟ್‌ಗಳಿಗೆ ಮತದಾರರನ್ನು ಶಿಫ್ಟ್ ಮಾಡಲಾಗಿದೆ. ಮತದಾರರು ಭದ್ರತಾ ಸಿಬ್ಬಂದಿ ಕಣ್ಗಾವಲಿನಲ್ಲಿಯೇ ಇರಲಿದ್ದು, ರೆಸಾರ್ಟ್‌ಗೆ ತೆರಳುವ ಮತದಾರರಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.ಬೆಳಗಾವಿ ಡಿಸಿಸಿ ಬ್ಯಾಂಕಿನ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧಿಸಿರುವ ಅಣ್ಣಾಸಾಹೇಬ ಜೊಲ್ಲೆ ಅವರ ಜೊತೆ ನಾವಿದ್ದೇವೆ. ಅವರ ಗೆಲುವಿಗೆ ಶ್ರಮಿಸುತ್ತೇವೆ. ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ 9 ಜನ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ.