ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪ್ರಸಕ್ತ ಹಂಗಾಮಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯುವ ಗುರಿಯನ್ನು ಹೊಂದಿದೆ ಎಂದು ಅರಿಹಂತ್ ಶುಗರ್ಸ್ ಇಂಡಸ್ಟ್ರೀಸ್‌ನ ಎಂ.ಡಿ, ಉದ್ಯಮಿ ಅಭಿನಂದನ ಪಾಟೀಲ ಹೇಳಿದರು.ಸಮೀಪದ ಜೈನಾಪುರ ಶ್ರೀ ಅರಿಹಂತ್ ಶುಗರ್ ಇಂಡಸ್ಟ್ರೀಸ್‌ನ 8ನೇ ಬಾಯ್ಲರ್ ಅಗ್ನಿಪ್ರದೀಪನಕ್ಕೆ ಸಹೋದರ ಯುವ ನಾಯಕ ಉತ್ತಮ ಪಾಟೀಲ ದಂಪತಿ ಸೇರಿ ಚಾಲನೆ ನೀಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತ ಸದಸ್ಯರಯ ಹಾಗೂ ಕಾರ್ಖಾನೆಗಳ ಎಲ್ಲ ಪದಾಧಿಕಾರಿಗಳ ಸಿಬ್ಬಂದಿ ವಿಶೇಷ ಸಹಕಾರದೊಂದಿಗೆ ಅರಿಹಂತ್ ಶುಗರ್ಸ್ ಕಳೆದ 7 ವರ್ಷಗಳಲ್ಲಿ ಹಂಗಾಮು ಯಶಸ್ವಿಯಾಗಿಸಿದೆ. ಗಡಿ ಪ್ರದೇಶಗಳಲ್ಲಿನ ರೈತರನ್ನು ಆರ್ಥಿಕವಾಗಿ ಬಲಪಡಿಸಲು ಮತ್ತು ಅವರು ಬೆಳೆಯುವ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ನೀಡಲು ಕಳೆದ ಏಳು ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ಸಹಕಾರಿ ಮಹರ್ಷಿ ದಿವಂಗತ ರಾವಸಾಹೇಬ್ ಪಾಟೀಲ ಅವರು ರೈತರ ಆರ್ಥಿಕ ಶೋಷಣೆಯನ್ನು ನಿಲ್ಲಿಸಲು ಮತ್ತು ಅವರಿಗೆ ನ್ಯಾಯಯುತ ಬೆಲೆಯನ್ನು ನೀಡಲು ಈ ಸಕ್ಕರೆ ಕಾರ್ಖಾನೆಯ ಮೂಲಕ ವಿಶೇಷ ಪ್ರಯತ್ನಗಳನ್ನು ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ, ಕಳೆದ 7 ವರ್ಷಗಳಲ್ಲಿ ನಾವು ರೈತರು ಮತ್ತು ಕಬ್ಬು ಬೆಳೆಗಾರರಿಗಾಗಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದೇವೆ. ಹಂಗಾಮು ಯಶಸ್ವಿಗೊಳಿಸಿ, ಈ ವರ್ಷ, ಕಾರ್ಖಾನೆಯ ಕ್ರಷಿಂಗ್ ಸಾಮರ್ಥ್ಯ ಹೆಚ್ಚಿಸಲಾಗಿದೆ. 6 ಲಕ್ಷ ಮೆಟ್ರಿಕ್ ಟನ್ ಕಬ್ಬು ಕ್ರಷಿಂಗ್ ಮಾಡುವ ಗುರಿಯನ್ನು ತಲುಪಲು ಎಲ್ಲರೂ ಸಹಕರಿಸಬೇಕು. ಕಾರ್ಮಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಅವರಿಗೆ ಸರಿಯಾದ ಸಮಯದಲ್ಲಿ ಸಂಬಳ ಮತ್ತು ಬೋನಸ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.ಸಹಕಾರ ರತ್ನ ಯುವ ನಾಯಕ ಉತ್ತಮ ಪಾಟೀಲ ಮಾತನಾಡಿ, ಸಹಕಾರಿ ವಲಯದಲ್ಲಿನ ನಮ್ಮ ಅನುಭವದಿಂದಾಗಿ ನಾವು ಸಕ್ಕರೆ ಕ್ಷೇತ್ರದಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದ್ದೇವೆ. ಜಿಲ್ಲೆಯ ಇತರೆ ಕಾರ್ಖಾನೆಗಳಂತೆ ನಾವು ರೈತರಿಗೆ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ನೀಡುವ ಮೂಲಕ ಅವರ ಆರ್ಥಿಕ ಜೀವನ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದ್ದೇವೆ. ಎಲ್ಲರ ಸಹಕಾರದಿಂದಾಗಿ ಪ್ರತಿ ಹಂಗಾಮು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಯುವರಾಜ ಪಾಟೀಲ ದಂಪತಿಗಳು ಧಾರ್ಮಿಕ ಪೂಜೆ ಸಲ್ಲಿಸಿದರು. ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಪೃಥ್ವಿರಾಜ್ ಪಾಟೀಲ, ವೈಷ್ಣವಿ ಪಾಟೀಲ, ಕಾರ್ಖಾನೆಯ ಸಿಇಒ ಮಹಾವೀರ ಪಾಟೀಲ, ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಬಿರನಾಳೆ, ಕೃಷಿ ಅಧಿಕಾರಿ ವಿಜಯ ಬಾಮನಗಿ, ಚಿಪ್ ಇಂಜಿನಿಯರ್ ಸುಧೀರ ಪಾಟೀಲ್, ರೋಹಿತ್ ಕಟಿಗೇರಿ, ಎಚ್.ಆರ್.ಸನತ ರಿಷಬ್ ಬಳ್ಳೋಳ ಉಪಸ್ಥಿತರಿದ್ದರು.